Sunday, October 18, 2009

ತುಳುವನ್ನು ಕನ್ನಡ ನುಂಗಿ! ಕನ್ನಡವಾ ಇಂಗ್ಲಿಷ್ ನುಂಗಿ...!

ತುಳು ಕಲಿಸುವ ಯೋಜನೆ ರೂಪುಗೊಂಡು ವಿದೇಶಕ್ಕೂ ತುಳು ಕಲಿಸುವ ಪ್ರತಿನಿಧಿಗಳು ಹಾರಿಹೋದದ್ದು ಸಂತಸದಾಯಕ ಸಂಗತಿ. ತುಳು ಅವನತಿ ಹೊಂದುತ್ತಿದೆ ಎಂದು ನಮಗೆಲ್ಲರಿಗೂ ಅನಿಸುತ್ತಿದೆ. ಆದರೆ ಭಾರತದ ಪ್ರಾದೇಶಿಕ ಭಾಷೆಗಳೇ ನಿಧಾನವಾಗಿ ಅವನತಿ ಹೊಂದುತ್ತಿರುವ ಪರಿಸ್ಥಿತಿಯೂ ನಿಮರ್ಮಾಣವಾಗಿದೆ. ಜನರ ಮನಸ್ಸು ಸದಾ ಹೊಸತನವನ್ನೇ ಬಯಸುತ್ತದೆ. ಈ ಬಯಕೆಯ ನಡುವೆ ನಿಧಾನವಾಗಿ ನಮ್ಮದು ಎಂಬ ಸಂಗತಿಗಳು ಮರೆಯಾಗುತ್ತಾ ಹೋಗುತ್ತಿರುವುದು ವಿಷಾದನೀಯ.
ಶಾಲೆಗಳಲ್ಲಿ ಇಂತಹದೇ ಭಾಷೆ ಮಾತನಾಡಬೇಕು ಎಂಬ ಅಘೋಷಿತ ಕಟ್ಟುಪಾಡುಗಳು ಬಹಳ ಹಿಂದಿನಿಂದಲೂ ಇತ್ತು. ನಮ್ಮ ಬಾಲ್ಯ ಕಾಲದಲ್ಲಿ ಶಾಲೆಯಲ್ಲಿ ಕನ್ನಡವನ್ನೇ ಮಾತನಾಡಬೇಕು ಎಂಬ ನಿಯಮವಿತ್ತು. ಅಪ್ಪಿ ತಪ್ಪಿ ಎಲ್ಲಿಯಾದರೂ ತುಳು ಮಾತನಾಡಿದರೆ ಕೆಲವು ಮಾಸ್ತರರು ಶಿಕ್ಷೆಯನ್ನು ನೀಡುತ್ತಿದ್ದರು. ಈ ಕಾರಣಕ್ಕಾಗಿ ಬಸ್ಕಿ, ಒಂಟಿ ಕಾಲಿನಲ್ಲಿ ನಿಲ್ಲುವುದು, ಛಡಿ ಏಟು ನೀಡುವ ಮಾಸ್ತರರು ಇದ್ದರು. ತಮಾಷೆ ಮಾಡಿ ಹೀಗಳೆಯುತ್ತಾ ನೀವು ಶಾಲೆಗೆ ಬರುವುದು ದಂಡಕ್ಕೆ ಎಂದು ಹೇಳುವವರೂ ಇದ್ದರು. ಆವಾಗ ತುಳು ಎನ್ನುವುದು ಅನಾಗರಿಕ ಭಾಷೆ ಎಂಬ ಕೀಳರಿಮೆ ಮನಸ್ಸಿನಲ್ಲಿ ಅಗೋಚರವಾಗಿ ತುಂಬುತ್ತಿತ್ತು.
ಹೈಸ್ಕೂಲ್ ಮೆಟ್ಟಲು ಹತ್ತುತ್ತಿದ್ದಂತೆ ಒಂದು ತರಗತಿಯ ಎ.ಬಿ.ಸಿ ಇತ್ಯಾದಿ ಹತ್ತಾರು ವಿಭಾಗಗಳಲ್ಲಿ ಎ ತರಗತಿ ಯಾವಾಗಲೂ ಇಂಗ್ಲಿಷ್ ಮೀಡಿಯಂಗೆ ಮೀಸಲಾಗಿರುತ್ತಿತ್ತು. ಇಂಗ್ಲಿಷ್ ಮೀಡಿಯಂನಲ್ಲಿ ಕಲಿಯುವ ವಿದ್ಯಾರ್ಥಿ ಎಂದರೆ ಆತ ವಿಶೇಷ ಆದರಣೆಗೆ ಪಾತ್ರವಾಗುತ್ತಿದ್ದ. ಆ ತರಗತಿಗೆ ಕಲಿಸುವ ಅಧ್ಯಾಪಕರಿಗೂ ಒಂದು ರೀತಿಯಲ್ಲಿ ವಿಶೇಷವಾದ ಗೌರವವಿರುತ್ತಿತ್ತು. ಇಂಗ್ಲಿಷ್ ಮೀಡಿಯಂ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿ ತರಗತಿಯಲ್ಲಿ ಇಂಗ್ಲಿಷನ್ನೇ ಮಾತನಾಡಬೇಕು. ಕನ್ನಡ ಮಾತನಾಡಿದರೆ ಕೆಲವು ಅಧ್ಯಾಪಕರು ಶಿಕ್ಷಿಸುತ್ತಲೂ ಇದ್ದರೂ. ಈ ಸಂದರ್ಭದಲ್ಲಿ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳಿಗೆ ಸಿಗುವ ವಿಶೇಷ ಗೌರವ ಕಂಡು ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಮನಸ್ಸಿನಲ್ಲೇ ಕೀಳರಿಮೆಯನ್ನು ತುಂಬಿಕೊಳ್ಳುತ್ತಿದ್ದರು. ಅವರಿಗೆ ಕನ್ನಡ ಎಂದರೆ ಅನಾಗರಿಕ ಭಾಷೆ ಇಂಗ್ಲಿಷ್ನಲ್ಲಿ ಹೆಚ್ಚುಗಾರಿಕೆ ಇದೆ ಎಂದು ಅನಿಸುತ್ತಾ ಇತ್ತು.
ಇದು ತುಳು ಮತ್ತು ಕನ್ನಡ ಭಾಷೆಗೆ ಮಾತ್ರ ಇರುವಂತಹಾ ಸಂಗತಿಯಲ್ಲ. ಭಾರತದಲ್ಲಿ ಎಲ್ಲೆಲ್ಲಾ ಎಷ್ಟೆಷ್ಟು ಪ್ರಾದೇಶಿಕ ಭಾಷೆಗಳು ಇದೆಯೋ ಅಂತಹವರೆಲ್ಲರ ಪರಿಸ್ಥಿತಿಯೂ ಇದೇ ಆಗಿತ್ತು. ಹೀಗಿರುವಾಗ ಪ್ರಾದೇಶಿಕ ಭಾಷೆಗಳನ್ನು ಅಳಿವಿನಂಚಿಗೆ ದೂಡಿದವರು ಯಾರು? ಎಂಬ ಪ್ರಶ್ನೆಗೆ ನಾವೇನು ಉತ್ತರ ಕೊಡುವುದಕ್ಕೆ ಸಾಧ್ಯ? ತುಳುವನ್ನು ಕೀಳರಿಮೆಯಿಂದ ದೂರ ಮಾಡುತ್ತಾ ಕನ್ನಡಕ್ಕೆ ಆದರವನ್ನು ಕೊಟ್ಟ ನಾವು ನಿಧಾನವಾಗಿ ಕನ್ನಡದ ಬಗ್ಗೆಯೂ ಕೀಳರಿಮೆಯನ್ನು ತುಂಬಿಸಿಕೊಂಡು ಇಂಗ್ಲಿಷ್ಗೇ ಮಣೆ ಹಾಕುತ್ತಿದ್ದೇವೆಯಲ್ಲವೆ? ತುಳುವನ್ನು ಕನ್ನಡ ದೂರ ಮಾಡಿದರೆ ಕನ್ನಡವನ್ನು ಇಂಗ್ಲಿಷ್ ನುಂಗಿ ಬಿಡುತ್ತದೆ.
ತುಳುವರೇನೋ ಜಾಗೃತಗೊಂಡು ಎಲ್ಲೋ ಮೂಲೆಯಲ್ಲಿದ್ದ ತುಳು ಲಿಪಿಯ ಮೇಲಿನ ಧೂಳನ್ನು ಕೊಡವಿ ತುಳು ಕಲಿಯುವಲ್ಲಿ ಉತ್ಸಾಹವನ್ನು ತೋರುತ್ತಿದ್ದಾರೆ. ಇಂತಹಾ ಪರಿಸ್ಥಿತಿ ಒಂದು ಸಂದರ್ಭದಲ್ಲಿ ಕನ್ನಡಕ್ಕೂ ಬಂದು ಬಿಡುವ ಸಾಧ್ಯತೆ ಇದೆ. ಹಾಗಿರುವಾಗ ನಾವು ನಮ್ಮದು ಎಂಬ ಭಾಷೆ, ಸಂಸ್ಕೃತಿ, ವಸ್ತು, ಸೊತ್ತುಗಳ ಬಗ್ಗೆ ಎಂದಿಗೂ ಕೀಳರಿಮೆಯನ್ನು ಹೊಂದಬಾರದು. ನಮ್ಮದರ ಬಗ್ಗೆ ಅನಾದರ ತೋರದೆ ಹೆಮ್ಮೆ ಪಡುತ್ತಾ ಇನ್ನೊಂದನ್ನು ಸ್ವಾಗತಿಸುವ ಪರಿಪಾಠ ಬೆಳೆದು ಬಂದರೆ `ಭಾಷೆಯ ಅವನತಿ' ಎಂಬ ಪದವನ್ನು ಶಬ್ದಕೋಶಕ್ಕೆ ಮಾತ್ರ ಸೀಮಿತ ಮಾಡಿಬಿಡಬಹುದು.

No comments:

Post a Comment