Sunday, November 8, 2009

ಅಡಿಕೆ ಹಾಳೆಯ ಮೋಟಾರಿನ ನೆನಪು



ಒಂದೆರಡು ದಶಕಗಳ ಹಿಂದೆ ತುಳುನಾಡಿನಲ್ಲಿ ಕೂಸು ಹುಟ್ಟಿದರೆ ಮನೆಯ ಯಜಮಾನ ಅಥವಾ ಕೆಲಸದ ಆಳುಗಳು ಅಡಕೆಯ ತೋಟಕ್ಕೆ ಒಂದು ಸುತ್ತು ಹೊಡೆದು ಮೆದುವಾದ ಅಗಲವಾದ ಅಡಕೆಯ ಹಾಳೆಗಳನ್ನು ಹೆಕ್ಕಿ ತರುತ್ತಿದ್ದರು. ಎಳೆಮಗುವಿಗೆ ಗಿಡಮೂಲಿಕೆಗಳಿಂದ ಕೂಡಿದ ತೆಂಗಿನ ಎಣ್ಣೆ ಹಚ್ಚಿ ಮಾಲೀಸು ಮಾಡಿ ಅಡಕೆ ಹಾಳೆಯ ಮೇಲೆ ಮಲಗಿಸುತ್ತಿದ್ದರು. ಹಾಳೆ ಮೃದುವಾಗಿದ್ದು ಎಳೆಯ ಚರ್ಮಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಿತ್ತು. ತಾಯಿಗೆ ಹಿಡಿದುಕೊಳ್ಳುವುದಕ್ಕೂ ಸುಲಭವಾಗುತ್ತಿತ್ತು. ಈಗ ಯುವಾಸ್ಥೆಯಲ್ಲಿರುವ ಹಿಂದಿನ ತುಳುನಾಡ ಮಕ್ಕಳು ಅಡಕೆ ಹಾಳೆಯ ಮೇಲೆ ಮಲಗಿದವರೇ. ಈಗ ಹಾಳೆಯ ಸ್ಥಾನವನ್ನು ವಿವಿಧ ಕಂಪೆನಿಗಳ ದುಬಾರಿ ರಬ್ಬರ್ ಹಾಳೆ ಆಕ್ರಮಿಸಿಕೊಂಡಿದ್ದರೂ ಕೆಲವು ಕಡೆ ಎಳೆಯ ಮಕ್ಕಳನ್ನು ಮಲಗಿಸಲು ಹಾಳೆಯನ್ನೇ ಉಪಯೋಗಿಸುತ್ತಾರೆ.
ಅಡಕೆ ಹಾಳೆಯನ್ನು `ಪ್ರೆಸ್' ಮಾಡಿ ತಟ್ಟೆಗಳು, ಬಟ್ಟಲುಗಳು, ಕಪ್ ಪರಿವರ್ತಿಸುವ ಉದ್ಯಮಗಳು ಈಗ ಇವೆ. ಬ್ರಹ್ಮಕಲಶೋತ್ಸವ, ನಾಗಮಂಡಲ ಮುಂತಾದ ಬೃಹತ್ ಸಂಖ್ಯೆಯ ಜನರು ಸೇರುವ ಸಮಾರಂಭಗಳಲ್ಲಿ `ಬುಫೆ' ವಿಧಾನದಲ್ಲಿ ಊಟ ಮಾಡಲು ಮೊದಲ ಮೊದಲು ಅಡಕೆ ಹಾಳೆಗಳನ್ನು ಹಾಗೇ ಬಳಸಲಾಗುತ್ತಿದ್ದರೂ, ಈಗೀಗ ಬಟ್ಟಲಿನಾಕಾರಲ್ಲಿ ಪರಿವರ್ತಿಸಿದ ತಟ್ಟೆಗಳು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಪ್ರಕೃತಿ ಸಹ್ಯವೂ, ಆರೋಗ್ಯಕಾರಿಯೂ ಹೌದು. ಪ್ಲಾಸ್ಟಿಕನಂತೆಮಣ್ಣಿನೊಳಗೆ ಸೇರಿ ಎಂದಿಗೂ ಕರಗದೆ ಇರುವಂತಹುದಲ್ಲ. ಸುಲಭವಾಗಿ ಮಣ್ಣಿನಲ್ಲಿ ಬೆರೆತು ಮಣ್ಣಾಗಿ ಹೋಗುತ್ತದೆ. ಮಿತವ್ಯಯ, ಕೃಷಿಗೆ ಉತ್ತೇಜನ ನೀಡುವುದಕ್ಕಾಗಿ ಮತ್ತು ಸುಲಭವಾಗಿ ಬಳಸಬಹುದಾದುದರಿಂದ ಇದರ ಉಪಯೋಗ ವ್ಯಾಪಕವಾಗುತ್ತಿದೆ.
ಅಡಕೆ ಹಾಳೆಯಿಂದ ಹಲವಾರು ಕರಕುಶಲ ವಸ್ತುಗಳನ್ನೂ ತಯಾರಿಸಲಾಗುತ್ತದೆ. ಯಾವ ರೀತಿಯ ಬಗ್ಗುವಿಕೆಗೂ ಇದು ಒಗ್ಗುವುದರಿಂದ ಆಕರ್ಷಕ, ಸುಂದರವಾದ ಕಲಾವಸ್ತುಗಳನ್ನು ಇದರಿಂದ ತಯಾರಿಸಬಹುದಾಗಿದೆ. ಭೂತಕೋಲದಲ್ಲಿ ಅಡಕೆ ಹಾಳೆ ಬಹುಉಪಯೋಗಿ ವಸ್ತುವಾಗಿದೆ. ಭೂತದ ಮೊಗ (ಮುಖವಾಡ) ಇಲ್ಲದೆ ಕಡೆಗಳಲ್ಲಿ ಹಾಳೆಯ ಮೊಗವನ್ನು ತಯಾರಿಸಲಾಗುತ್ತದೆ. ಭೂತ ಕಟ್ಟುವವರು ಮೊಣಕಾಲಿಗೆ ಹಾಳೆಯ ತುಂಡನ್ನು ಕಟ್ಟಿಕೊಳ್ಳುತ್ತಾರೆ. ಫ್ಯಾನ್ ಆಗಮಿಸುವ ಮೊದಲು ಬೇಸಿಗೆ ಕಾಲದಲ್ಲಿ ಬೀಸಣಿಗೆ ಮಾಡಲೂ ಇದು ಉಪಯೋಗವಾಗುತ್ತಿತ್ತು. ಕೃಷಿಕಾರ್ಯಗಳಲ್ಲಿ ತಲೆಹೊರೆಗೆ ಶಿರಸ್ತ್ರಾಣವಾದ `ಮುಟ್ಟಾಲೆ', ಗೊಬ್ಬರ, ನೇಜಿ ಹೊರವಾಗ ನೀರು ತಲೆಗೆ ತಾಗದಂತೆ ಧರಿಸುವ `ಅರುಂಬುಡೆ'ಗಳನ್ನು ಹಾಲೆಯಿಂದ ತಯಾರಿಸಲಾಗುತ್ತಿತ್ತು, ಈಗ ಕೆಲವು ಕಡೆ ಇದರ ಸ್ಥಾನವನ್ನು ಹೆಲ್ಮೆಟ್ಗಳು ಆಕ್ರಮಿಸಿಕೊಂಡಿದೆ.
ಒಂದು ಕಾಲದಲ್ಲಿ ಯಾರೂ ಕೇಳುವವರಿಲ್ಲದೆ ತೋಟದಲ್ಲೆಲ್ಲಾ ಕಸವಾಗಿ ಬೀಳುತ್ತಿದ್ದ ಅಡಕೆ ಸೋಗೆ ಮತ್ತು ಹಾಳೆಗಳು ಬಿಸಿನೀರು ಕಾಯಿಸಲು ಮಾತ್ರ ಉಪಯೋಗವಾಗುತ್ತಿತ್ತು. ಅಂದಿನ ಕಾಲದ ಮಕ್ಕಳಿಗೆ ಈಗಿನಂತೆ ಮೂರು ಚಕ್ರದ ಸೈಕಲ್. ಪ್ಲಾಸ್ಟಿಕ್, ಫೈಬರ್ ಚಕ್ರದ ಗಾಡಿಗಳು ಇರಲಿಲ್ಲ. ಎಲ್ಲೋ ಶ್ರೀಮಂತರ ಮನೆಯ ಮಕ್ಕಳು ಕಾಂಕ್ರೀಟ್ ಹಾಕಿದ ಮನೆಯ ಅಂಗಳದಲ್ಲಿ ಮಾತ್ರ ಸೈಕಲ್ನಲ್ಲಿ ಆಟವಾಡುತ್ತಿದ್ದರು. ಆ ಸಂದರ್ಭದಲ್ಲಿ ಸಾಮಾನ್ಯ ವರ್ಗದ ಮಕ್ಕಳಿಗೆ ಅಡಿಕೆ ಹಾಳೆಯ ಸುಲಭದ ಆಟದ ಸಾಧನವಾಗಿತ್ತು. ಈ ಆಟ ಆಡಲು ಕನಿಷ್ಠ ಇಬ್ಬರ ಅವಶ್ಯಕತೆ ಇತ್ತು. ಅಡಕೆಯ ಹಾಳೆಯ ಮೇಲೆ ಓರ್ವ ಕುಳಿತುಕೊಂಡರೆ ಇನ್ನೋರ್ವ ಅದರ ಸೋಗೆಯ ಭಾಗದಲ್ಲಿ ಹಿಡಿದು ಎಳೆಯುವುದು. ನಿಗದಿತ ದೂರ, ನಿಗದಿತ ಸುತ್ತು ಮುಗಿದ ನಂತರ ಎಳೆಯುವವ ಕುಳಿತು ಕುಳಿತವ ಎಳೆಯುವುದು ಈ ಆಟದ ಅಘೋಷಿತ ನಿಯಮ. ತೋಟ, ಅಂಗಳ ಮನೆಯ ಹಿಂದಿನ ದಾರಿ, ಗದ್ದೆಯ ನಡುವಿನ ದಾರಿ, ಗದ್ದೆಯ ಹುಣಿ ಇವೆಲ್ಲಾ ಈ ಹಾಳೆಯ ಆಟದ ಅಂಗಣಗಳು ಈ ಆಟದಲ್ಲಿ ಮಕ್ಕಳು ಎಷ್ಟು ತಲ್ಲೀನರಾಗಿರುತ್ತಿದ್ದರೆಂದರೆ ಹಾಳೆ ಹರಿದು ಹೋಗಿ ಒಂದು ಹಾಳೆಯ ಮೇಲೆ ಇನ್ನೊಂದು ಹಾಳೆಯನ್ನಿಟ್ಟು ಎಳೆಯುವುದು. ಹೆಚ್ಚು ಮಕ್ಕಳಿದ್ದರೆ ಇಬ್ಬರು ಮೂವರನ್ನು ಕುಳ್ಳಿರಿಸಿ ದೊಡ್ಡ ಮಕ್ಕಳು, ದೊಡ್ಡ ಮಕ್ಕಳನ್ನು ಎರಡು ಮೂರು ಸಣ್ಣ ಮಕ್ಕಳು ಸೇರಿ ಎಳೆಯುವುದು, ಹಾಳೆ ಹರಿದ ಪರಿವೆಯೇ ಇಲ್ಲದೆ ತೊಟ್ಟುಕೊಂಡ ಚೆಡ್ಡಿಯೂ ಹಿಂಭಾಗದಲ್ಲಿ ಒಂದಷ್ಟಗಲ ಹರಿದು ಹೋಗುವುದೂ ನಡೆಯುತ್ತಿತ್ತು.
ಹಿಂದೆಲ್ಲಾ ಅಡಕೆಯ ಹಾಳೆಯನ್ನು ಕಂಡ ಕೂಡಲೇ ಮಕ್ಕಳ ಮನಸ್ಸಿಗೆ ಈ ಒಂದು ಆಟ ತಕ್ಷಣ ಹೊಳೆದು ಬಿಡುತ್ತಿತ್ತು. ಈಗ ಕಾಲ ಬದಲಾಗಿದೆ. ಮಕ್ಕಳ ಆಟಕ್ಕೆ ವಿವಿಧ ಸಲಕರಣೆಗಳು ಬಂದುಬಿಟ್ಟಿದೆ. ಇಂತಹದ್ದೊಂದು ಆಟ ಇದೆ ಎಂದು ಮಕ್ಕಳಿಗೆ ಹೇಳಿದರೆ ಒಂದೈದು ನಿಮಿಷ ಅದರಲ್ಲಿ ಆಸಕ್ತಿ ತೋರಿಸುತ್ತಾರೆ.
ವಿಶ್ವ ತುಳು ಸಮ್ಮೇಳನದ ಪೂರ್ವಭಾವಿಯಾಗಿ ಅಲ್ಲಲ್ಲಿ ನಡೆಯುತ್ತಿರುವ ತುಳುವೆರ್ನ ಗೊಬ್ಬುಲು ಕಾರ್ಯಕ್ರಮಗಳಲ್ಲಿ `ಪಾಲೆಡೊಯ್ಪುನ ಪಂಥ' ಆಟವನ್ನು ನೆನಪಿಸುವ ಕೆಲಸವನ್ನು ಮಾಡಲಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇದು ತುಳುನಾಡಿನ ಕಳೆದುಹೋದ ಒಂದು ಸವಿನೆನಪನ್ನು ಮತ್ತೆ ನೆನಪಿಸುತ್ತಿದೆ.

No comments:

Post a Comment