Tuesday, October 27, 2009

ತುಳುನಾಡಿನ `ದೋಲು' ಸ್ಥಾನವನ್ನು ಆಕ್ರಮಿಸುತ್ತಿರುವ 'ನಾಸಿಕ್ ಬ್ಯಾಂಡ್

ತುಳುನಾಡಿನಲ್ಲಿ ನಡೆಯುವ ಮೆರವಣಿಗೆ ಮುಂತಾದ ಕಾರ್ಯಕ್ರಮಗಳಲ್ಲಿ ನಾಸಿಕ್ ಬ್ಯಾಂಡ್ ಎಂಬ ವಾದನ ತಂಡವೊಂದು ಕಾಣಿಸಿಕೊಳ್ಳುತ್ತಿದೆ. ಎಲ್ಲಿಯ ನಾಸಿಕ್ ಎಲ್ಲಿಯ ಮಂಗಳೂರು ಎಂಬ ಪ್ರಶ್ನೆ ಮನಸ್ಸಿನಲ್ಲಿ ಸಹಜವಾಗಿ ಮೂಡುತ್ತದೆ. ಮಹಾರಾಷ್ಟ್ರದಲ್ಲಿ ನಾಸಿಕ್ ಬ್ಯಾಂಡ್ ಎಂಬುದು ಮರಾಠಿಗರ ಮದುವೆಯ ಸಂದರ್ಭದಲ್ಲಿ ಅನಿವಾರ್ಯವಾದ ವಾದನವಾಗಿದೆ. ಮದುವೆ ಸಂದರ್ಭದಲ್ಲಿ ಮದುಮಕ್ಕಳ ಮೆರವಣಿಗೆ ಮಾಡಲು ನಾಸಿಕ್ ಬ್ಯಾಂಡ್ ಅನಿವಾರ್ಯ. ಎರಡು ಮೂರು ಡೋಲು, ಏಳೆಂಟು ಸಣ್ಣ ಸಣ್ಣ ವಾದನಗಳು ಜತೆಗೆ ಧ್ವನಿ ವರ್ಧಕ ಅಳವಡಿಸಿದ ಕೀಬೋರ್ಡ್ ಗೌಜಿಯಲ್ಲಿ ಇಂತಹಾ ಮದುಮಕ್ಕಳ ಮೆರವಣಿಗೆ ಮುಂಬೈ ನಗರದಲ್ಲಿ ಹಗಲೂ ರಾತ್ರಿ ನಡೆಯುತ್ತದೆ. ಸಂಭ್ರಮದ ವಾತಾವರಣ ಈ ಬ್ಯಾಂಡ್ಸೆಟ್ ಉಂಟು ಮಾಡಿದರೂ, ಶಾಂತತೆಯನ್ನು ಬಯಸುವ ಜನರಿಗೆ ಕಿರಿಕಿರಿ ಎಂದೆನಿಸಬಹುದು.
ಈ ವಾದನದ ಭರಾಟೆಯನ್ನು ಗಮನಿಸಿದಾಗ ತುಳುವರಿಗೆ ತುಳುನಾಡಿನ ದೋಲು (ದುಡಿ) ನೆನಪಿಗೆ ಬಂದೇ ಬರುತ್ತದೆ. ನಾಸಿಕ್ ಬ್ಯಾಂಡ್ನ ಕರ್ಕಶ ಧ್ವನಿಯ ನಡುವೆ ತುಳುನಾಡಿನ ಡೋಲು ವಾದನ ನೆನೆಪಿಸಿಕೊಂಡರೆ ಮನಸ್ಸಿಗೆ ಮುದವನ್ನು ನೀಡುತ್ತದೆ. ಡೋಲು, ತಮಟೆ, ತಾಳ ಮತ್ತು `ಪುರಲ್ ಎಂದು ಹೇಳುವ ಕೊಳಲಿನ ಮಧುರ ಧ್ವನಿ ಮನಸ್ಸಿಗೆ ಆನಂದವನ್ನುಂಟುಮಾಡುತ್ತಿತ್ತು. ಅಳು, ನಗು, ಸಂಭ್ರಮದ ಸಂಕೇತದ ಧ್ವನಿಯನ್ನು ಈ ದೋಲು ಹೊರ ಹೊಮ್ಮಿಸುತ್ತಿತ್ತು. ಮುಂದುವರಿದವರ ದರ್ಪ. ಶೋಷಣೆ ಮುಂತಾದ ಹೆಸರುಗಳಿಂದ ಉಂಟಾದ ಪ್ರತಿಭಟನೆಯ ಕಾವಿನಿಂದ ತುಳುನಾಡಿನ ದೋಲು ಅಥವಾ ಡೋಲು ಮಾಯವಾಗಿ ಅದರ ಸ್ಥಾನದಲ್ಲಿ ನಾಸಿಕ್ ಬ್ಯಾಂಡ್ ಎಂಬ ಕರ್ಕಶ ಧ್ವನಿ ಹೊರಡಿಸುವ ವಾದನ ಆಕ್ರಮಿಸಿಕೊಂಡದ್ದು ದುರಾದೃಷ್ಟವೆಂದೇ ಹೇಳಬಹುದಾಗಿದೆ.
ತುಳುನಾಡಿನ ಕಟ್ಟುಪಾಡುಗಳಲ್ಲಿ ವಿವಿಧ ಜನಾಂಗಗಳು ನಿರ್ವಹಿಸುವ ಕಾರ್ಯಗಳು `ಅಜಲು' ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಬರಬರುತ್ತಾ ಮುಂದುವರಿದವರು ನಿರ್ವಹಿಸುವ ಅಜಲು ಕಾರ್ಯವು ವಿಶೇಷವಾದ ಮಯರ್ಾದೆ, ಮನ್ನಣೆಯನ್ನು ಪಡೆದುಕೊಳ್ಳಲಾರಂಭಿಸಿತು. ಅವುಗಳಿಗೆ ವಿಶೇಷವಾದ ಸಂಭಾವನೆ ದೊರಕಲಾರಂಭಿಸುತ್ತು. ಮತ್ತೆ ಕೆಲವು ಹಿಂದುಳಿದ ಜನಾಂಗಗಳು ನಿರ್ವಹಿಸುವ `ಅಜಲು'ಗಳು ಶೋಷಣೆಯ ರೂಪವನ್ನು ತಳೆಯಲಾರಂಭಿಸಿತು. ಯಾವುದೇ ಸಂಭಾವನೆ ಇಲ್ಲದೆ ದೈವದ ಭಕ್ತಿಯನ್ನು ಹುಟ್ಟಿಸಿ ರಾತ್ರಿ ಹಗಲು ದುಡಿಸುವುದು, ಡೋಲು ಬಾರಿಸುವುದು ನಡೆಯತೊಡಗಿದಾಗ. ಕಂಬಳ, ಜಾತ್ರೆ, ಮರಣ ಸಂದರ್ಭಗಳಲ್ಲಿ ಬೆದರಿಸಿ ಡೋಲು ಬಾರಿಸಲು ಒತ್ತಾಯಿಸುವುದು. ಅದಕ್ಕೆ ಸರಿಯಾದ ಸಂಭಾವನೆ, ಮಯರ್ಾದೆ ದೊರಕದೇ ಹೋದಾಗ ಅಜಲು ಎಂಬುದು ಶೋಷಣೆ ಸಂಕೇತವಾಗಿಬಿಟ್ಟಿತು.
ಅಜಲು ಎಂದರೆ ಹಿಂದುಳಿದವರ ಕೆಲಸ ಎಂದೇ ಪರಿಗಣಿಸಲಾಯಿತು. ತುಳುನಾಡಿನ ಒಂದು ಊರಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಪುರೋಹಿತರ ಕೆಲಸ ಮತ್ತು ಅದೇ ಸಂದರ್ಭದಲ್ಲಿ ದೂರದ ಬೆಟ್ಟು ಗದ್ದೆಯಲ್ಲಿ ಡೋಲು ಬಾರಿಸುವ ವೃತ್ತಿ ಎರಡೂ ಕೂಡಾ ಇಂದಿಗೂ `ಅಜಲು' ಎಂದು ಹಳ್ಳಿಯ ಭಾಷೆಯಲ್ಲಿ ಕರೆಯಲ್ಪಡುತ್ತದೆ. ಆದರೆ ಗೌರವದ, ಸಂಭಾವನೆಯ ದೃಷ್ಟಿಯಿಂದ ಅಜಗಜಾಂತರ ವ್ಯತ್ಯಾಸವಾಗಿಬಿಟ್ಟಿದೆ.
ಈಗ ಅಜಲು ಪದ್ಧತಿಯ ನಿಷೇಧವಾಗಿದೆ. ಅದರ ಜತೆ ತುಳುನಾಡಿನ ಅಮೂಲ್ಯವಾದ ಡೋಲು ವಾದನ ಕಲೆಯೂ ನಶಿಸಿ ಹೋಗುತ್ತಿದೆ. ಈ ನಡುವೆ ಡೋಲುವಾದನ ಶೋಷಣೆಯ ಸಂಕೇತವಲ್ಲ. ಅದೊಂದು ಕಲೆ ಎಂದು ಕೆಲವರು ಹೇಳುತ್ತಿರುವುದು, ಅದನ್ನು ಬಾರಿಸಲು ಉತ್ಸುಕತೆ ತೋರಿಸುತ್ತಿರುವುದು ಸ್ವಾಗತಾರ್ಹ.
ಡಾ. ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯಲ್ಲಿ ದುಡಿ ಅಥವ ದೋಲಿನ ವರ್ಣನೆ ಇದೆ.
ದೋಲು ತುಳುನಾಡಿನಲ್ಲಿ ವಿಶೇಷವಾದ ಗೌರವಕ್ಕೆ ಪಾತ್ರವಾಗಿತ್ತು. ಜಾತ್ರೆ ಸಂದರ್ಭಗಳಲ್ಲಿ ಡೋಲು ಬಾರಿಸುವ ಸಂಪ್ರದಾಯವಿತ್ತು. ಬಪ್ಪನಾಡಿನ ಡೋಲು ಇತಿಹಾಸ ಪ್ರಸಿದ್ಧವಾಗಿದೆ. ಇಲ್ಲಿ ಹರಕೆ ಹೇಳಿ ಡೋಲು ಬಾರಿಸುವ ಸಂಪ್ರದಾಯವಿದೆ. ಡೋಲು ಎಂಬುದು ಸಾಮಾಜಿಕ ಪದ್ಧತಿಯ ಅವಿಭಾಜ್ಯ ಅಂಗವಾಗಿತ್ತು. ನಾಸಿಕ್ ಬ್ಯಾಂಡಿನಂತೆ ಮೆರವಣಿಗೆಯ ಅಂಗ ಮಾತ್ರವಾಗಿರಲಿಲ್ಲ.

No comments:

Post a Comment