Thursday, November 19, 2009

ಬದಲಾದದ್ದು ನಾವು, ಮಳೆರಾಯನಲ್ಲ



ಜಾಗತಿಕ ತಾಪಮಾನ ಹೆಚ್ಚಳದಿಂದ ವಾತಾವರಣದಲ್ಲಿ ಏರುಪೇರು ಉಂಟಾಗಿ ಮಳೆ, ಬಿಸಿಲುಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಅಕಾಲಿಕ ಮಳೆ, ಪ್ರವಾಹ, ಚಂಡಮಾರುತಗಳು ಉಂಟಾಗುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಹೇಳಿಕೆಗಳಲ್ಲಿ ಸತ್ಯಾಂಶವಿರಬಹುದು. ಆದರೆ ತುಳುನಾಡಿನ ಬೆಳೆಗಳಿಗೆ ಸಂಬಂಧಪಟ್ಟಂತೆ ಇದು ಎಷ್ಟು ಸರಿ ಎಂಬುದು ಜಿಜ್ಞಾಸೆಯಾಗಿದೆ.
ಫಯಾನ್ ಚಂಡಮಾರುತದಿಂದ ತುಳುನಾಡಿನ ಭತ್ತದ ಬೆಳೆಗಳಿಗೆ ಅಪಾರ ಹಾನಿ ಉಂಟಾಯಿತು. ಕಟಾವು ಮಾಡಲ್ಪಟ್ಟ ಭತ್ತದಗಿಡಗಳ ಸೂಡಿಗಳು ನೆರೆನೀರಿನಲ್ಲಿ ತೇಲಾಡತೊಡಗಿದವು. ಇದು ಈ ಬಾರಿ ಮಾತ್ರ ಸಂಭವಿಸಿದ ಅನಾಹುತ ಎಂದು ನಾವು ತಿಳಿದುಕೊಳ್ಳಬೇಕಾಗಿಲ್ಲ. ವರ್ಷ ವರ್ಷವೂ ಈ ರೀತಿಯ ಬೆಳೆಹಾನಿ ಸಂಭವಿಸುತ್ತಲೇ ಇರುತ್ತದೆ. ನಾಟಿ ಸಂದರ್ಭದಲ್ಲಿ ಮಳೆ ನಾಪತ್ತೆಯಾಗಿ, ಕಣ್ಣಾಮುಚ್ಚಾಲೆಯಾಡುತ್ತಾ ರೈತರನ್ನು ಸತಾಯಿಸುವ ಮಳೆ ಕಟಾವು ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಕಂಗಾಲಾಗುವಂತೆ ಮಾಡುತ್ತದೆ. ಈಚೇಚೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ. ಹಾಗಾದರೆ ಅಕಾಲಿಕ ಮಳೆ ಈಗ ಮಾತ್ರ ಬರುತ್ತದೆಯೇ ಹಿಂದೆ ಬರುತ್ತಿರಲಿಲ್ಲವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.
ಈ ಬಗ್ಗೆ ತುಳುನಾಡಿನ ಕೆಲವು ಹಿರಿಯರಲ್ಲಿ ಮಾತನಾಡಿದರೆ ಮಳೆರಾಯ ಬದಲಾಗಿಲ್ಲ ನಾವು ಬದಲಾಗಿದ್ದೇವೆ ಎಂಬ ವಿಚಾರ ತಿಳಿದು ಬರುತ್ತದೆ. ತುಳುನಾಡಿನ ಹಿರಿಯರು ಹೇಳುವ ಪಗ್ಗು, ಬೇಶ. ಇತ್ಯಾದಿ ತಿಂಗಳುಗಳನ್ನು ಜನವರಿ, ಫೆಬ್ರವರಿ ಮುಂತಾದ ತಿಂಗಳುಗಳಿಗೆ ಅನ್ವಯಿಸಿ ನೋಡಿದರೆ ಫೆಬ್ರವರಿ, ಮಾಚರ್್ ತಿಂಗಳ ಸುಡಬಿಸಿಲ ಕಾಲದಲ್ಲಿಯೂ ಅಪಾರ ಮಳೆ ಬಿದ್ದ ವಿಚಾರ ಅವರ ಅನುಭವದ ಬುತ್ತಿಯಿಂದ ಬಿಚ್ಚಲ್ಪಡುತ್ತದೆ. ಈಗ ನಾವು ಇಂತಹ ಅಕಾಲಿಕ ಮಳೆಗಳು ಚಂಡಮಾರುತಗಳಿಂದಾಗಿ ಉಂಟಾಗುತ್ತಿವೆ ಎಂದು ಹೇಳುತ್ತಿದ್ದೇವೆ. ಫಯಾನ್ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತೇವೆ. ವಿಜ್ಞಾನ ಮುಂದುವರಿದಂತೆ ಪ್ರಕೃತಿಗೆ ಸಂಬಂಧಪಟ್ಟಂತೆ ಭೀತಿಗಳು ಸೃಷ್ಟಿಯಾಗುತ್ತಲೇ ಸಾಗಿದೆ.
ಹಿಂದಿನ ಕಾಲದ ತುಳುನಾಡಿನ ಕೃಷಿಕರು ಯಾವ ಚಂಡಮಾರುತ, ಪ್ರಕೃತಿ ವಿಕೋಪಗಳನ್ನೂ ಎದುರಿಸುವಂತಹಾ ತಾಖತ್ತು ಹೊಂದಿದ್ದರು. ಮೂರು ನಾಲ್ಕು ದಶಕಗಳ ಹಿಂದಿನ ಅವಿಭಕ್ತ ಕುಟುಂಬಗಳು ಕೃಷಿಕಾರ್ಯಗಳಿಗಾಗಿ ಯಾರನ್ನೂ ಅವಲಂಬಿಸುವ ಅಗತ್ಯವನ್ನು ಹೊಂದಿರಲಿಲ್ಲ. ಮಳೆ ಬಿದ್ದ ಕೂಡಲೇ ಮನೆಯ ಎಲ್ಲಾ ಸದಸ್ಯರು ಒಂದೊಂದು ಕೆಲಸವನ್ನು ಹಚ್ಚಿಕೊಳ್ಳುತ್ತಾ ಕೃಷಿಕಾರ್ಯಗಳಲ್ಲಿ ತೊಡಗುತ್ತಿದ್ದರು. ಮೊದಲ ಮಳೆಗೆ ನೇಜಿ ಹಾಕಿ, ಮಳೆ ಸರಾಗವಾಗಿ ಬೀಳತೊಡಗಿದಾಗ ಗದ್ದೆಗಳನ್ನು ಉತ್ತು ನೇಜಿ ನೆಟ್ಟು ಆದಷ್ಟು ಶೀಘ್ರ ಕೃಷಿ ಕಾರ್ಯ ಮುಗಿಸಿಬಿಡುತ್ತಿದ್ದರು. ಮಳೆ ಕೈಕೊಟ್ಟರೂ ಕೆರೆ, ಹಳ್ಳಗಳಿಂದ ಸಾಂಪ್ರದಾಯಿಕ ವಿಧಾನಗಳಿಂದ ನೀರು ಎತ್ತಿ ಬೆಳೆಗಳಿಗೆ ಉಣಿಸುತ್ತಿದ್ದರು. ಕಟಾವು ಸಂದರ್ಭದಲ್ಲಿ ಮಳೆ ಬರುವ ಸೂಚನೆ ಇದ್ದರೆ ಕಟಾವು ಕಾರ್ಯವನ್ನು ಮಾಡದೆ, ಮಳೆ ಬರುವುದಿಲ್ಲ ಎಂದು ಖಚಿತವಾದ ಕೂಡಲೇ ಎಲ್ಲರೂ ಗದ್ದೆಗಿಳಿದು ಕಟಾವು ಮಾಡಿ ರಾತ್ರಿ ಹಗಲು ಕೆಲಸ ಮಾಡಿ ಕ್ಷಣಮಾತ್ರದಲ್ಲಿ `ಒತ್ತರೆ' ಮಾಡುತ್ತಿದ್ದರು. ಮಳೆರಾಯನಿಗೆ ತೊಂದರೆ ನೀಡಲು ಯಾವುದೇ ಅವಕಾಶವನ್ನೂ ಮಾಡುತ್ತಿರಲಿಲ್ಲ. ಆತ ಅಂದು ಕೂಡಾ ತನ್ನಿಚ್ಛೆಯಂತೆ ಬಂದು ಹೋಗುತ್ತಿದ್ದ.
ಆದರೆ ಈಗ ತುಳುನಾಡಿನ ಕೃಷಿ ಪದ್ಧತಿಯೇ ಬದಲಾಗಿದೆ. ಒಂದು ಗದ್ದೆಯನ್ನು ನಾಟಿಕಾರ್ಯಕ್ಕೆ ಸಿದ್ಧಗೊಳಿಸಬೇಕಾಗಿದ್ದರೆ ಹಿಂದೆಲ್ಲಾ ಬೆಳ್ಳಿ ಮೂಡಿದಾಗಲೇ ಎದ್ದು ಗೊಬ್ಬರ ಹರಡಿ ಕೋಣಗಳನ್ನು ಕಟ್ಟಿ ಸೂರ್ಯ ಮೂಡುತ್ತಿದ್ದಂತೆ ಅರ್ಧ ಗದ್ದೆಯನ್ನು ಹಸನುಗೊಳಿಸಿ ನಾಟಿಕಾರ್ಯಕ್ಕೆ ಸಿದ್ದಗೊಳಿಸುವ ಕಾರ್ಯ ಮುಗಿಯುತ್ತಿತ್ತು. ಈಗ ಕೆಲಸದಾಳುಗಳು ಯಾವಾಗ ಬರುತ್ತಾರೋ ಎಂದು ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಸಂಜೆ ಹೊತ್ತು ಮುಳುಗಿ ತಿಂಗಳ ಬೆಳಕಿನಲ್ಲೂ ನೇಜಿ ತೆಗೆಯುವ, ಧಾನ್ಯ ಹರಿಯುವ ಕೃಷಿಯ ಕಾರ್ಯಗಳು ನಡೆಯುತ್ತಿದ್ದವು. ಈಗ ಸಂಜೆ ಐದು ಐದೂವರೆಗೆ ಕೆಲಸದಾಳುಗಳು ಕೈಕಾಲು ತೊಳೆದುಕೊಂಡುಬಿಡುತ್ತಾರೆ. ಕೋಣಗಳು ನಾಪತ್ತೆಯಾಗಿ ಟಿಲ್ಲರ್ಗಳು ಪ್ರವೇಶವಾದ ನಂತರ ಗದ್ದೆಗಳನ್ನು ಉಳಲು ಊರಿನಲ್ಲಿ ಒಂದೆರಡು ಟಿಲ್ಲರ್ ಮಾಲಕರ, ನಡೆಸುವವರ ಪುರುಸೊತ್ತನ್ನು ಕಾಯುವ ಪರಿಸ್ಥಿತಿ ಬಂದಿದೆ. ನೀರಿರುವಾಗ ಗದ್ದೆ ಉಳಲು ಸಾಧ್ಯವಾಗುತ್ತಿಲ್ಲ. ನೀರಲ್ಲದೇ ಇರುವಾಗ ಟಿಲ್ಲರ್ ಬಂದು ಗದ್ದೆಯ ಬದಿಯಲ್ಲಿ ನಿಲ್ಲುತ್ತದೆ!
ಅದು ಹೇಗೋ ಮಾಡಿಕೊಂಡು ಗದ್ದೆಯ ನೆಟ್ಟು ಬೆಳೆ ಬೆಳೆದು ಕಟಾವು ಮಾಡಲೂ ಹೊರಗಿನ ಜನರನ್ನು ಕಾಯುವ ಪರಿಸ್ಥಿತಿ. ಕಟಾವು ಮಾಡಿದ ಪೈರನ್ನು ಅಂಗಳಕ್ಕೆ ತಂದು ಒತ್ತರೆ ಮಾಡಲೂ ಕೆಲಸದಾಳುಗಳು. ಈ ಸಂದರ್ಭದಲ್ಲಿ ಮೋಡಕವಿದರಂತೂ ಗಡಿಬಿಡಿಯೇ ಗಡಿಬಿಡಿ. ಮಳೆರಾಯನಿಗೊಂದಷ್ಟು ಶಾಪ ಹಾಕುತ್ತಾ ಕಟಾವು ಮಾಡಿದ ಪೈರು, ಅರ್ಧಕ್ಕೆ ನಿಂತ ಕಟಾವು ಮತ್ತಿತರ ಕಾರ್ಯವನ್ನು ಅಸಹಾಯಕತೆಯಿಂದ ನೋಡುವ ಪರಿಸ್ಥಿತಿ. ಭತ್ತದ ಗಿಡದ ಸೂಡಿಗಳು ನೆರೆಯಲ್ಲಿ ಕೊಚ್ಚಿಕೊಂಡು ಹೋದರೂ, ಭತ್ತ ನೀರಿನಲ್ಲಿ ಮುಳುಗಿ ಮೊಳಕೆ ಬಂದರೂ ಏನೂ ಮಾಡುವಂತಿಲ್ಲ. ಮಳೆರಾಯ ಯಾರ ಕಷ್ಟಸುಖಕ್ಕೂ ಸ್ಪಂದಿಸದೆ ಅಂದಿಗೂ ಇಂದಿಗೂ ಎಂದೆಂದಿಗೂ ತನ್ನಿಚ್ಛೆಯಂತೆ ಬಂದು ಹೋಗುತ್ತಲೇ ಇರುತ್ತಾನೆ.
ಆಧುನಿಕತೆ ಹೆಚ್ಚುತ್ತಾ ಹೋದಂತೆ ಮನುಷ್ಯ ಪ್ರಕೃತಿಯೊಂದಿಗೆ ಹೋರಾಡುವ ಚಾಕಚಕ್ಯತೆಯನ್ನು ಕಳೆದುಕೊಳ್ಳುತ್ತಲೇ ಹೋಗುತ್ತಾನೆ ಎಂಬುದಕ್ಕೆ ಫಯಾನ್ ಚಂಡಮಾರುತ, ಮಳೆ, ಬೆಳಗಳ ನಾಶ ಒಂದು ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. ಈಗಲೂ ಒಳನಾಡಿನ ಕೆಲವು ಹಳ್ಳಿಗಳಲ್ಲಿ ಉಳಿದುಕೊಂಡಿರುವ ಅವಿಭಕ್ತ ಕುಟುಂಬಗಳ ಕೃಷಿಕಾರ್ಯಗಳಿಗೆ ಮಳೆರಾಯನಿಂದ ಯಾವುದೇ ತೊಂದರೆಯಾಗುತ್ತಿಲ್ಲ ಎಂಬುದು ಗಮನಾರ್ಹ.

No comments:

Post a Comment