Tuesday, December 22, 2009

ಬಿಟ್ಟೆನೆಂದರೂ ಬಿಡದು ನಿನ್ನಯ ಮಾಯೆ


ತುಳುನಾಡಿನಲ್ಲಿ ದೈವಾರಾಧನೆ ಪ್ರಕೃತಿ ಪೂಜೆಯ ಪ್ರತೀಕ. ಈಗ ತುಳುನಾಡಿನಲ್ಲಿ ವಿಜೃಂಭಣೆಯಿಂದ ಪಂಚಲೋಹದ ಮುಗ, ಚಿನ್ನ, ಬೆಳ್ಳಿ ಬಿರುದಾವಳಿಗಳಿಂದ ವಿಜೃಂಭಿಸುತ್ತಾ ಆರಾಧಿಸಲ್ಪಡುವ ಹೆಚ್ಚಿನೆಲ್ಲಾ ದೈವಗಳು ನೂರಾರು ವರ್ಷಗಳ ಹಿಂದೆ ಸಾಗಿದರೆ ಕಲ್ಲು, ಮರಗಳಲ್ಲಿ ಅಡಗಿ ತನ್ನ ಮಾಯೆಯನ್ನು ಪ್ರದರ್ಶಿಸುತ್ತಿದ್ದವು. ದೈವಾರಾಧನೆಯ ಯಾವುದೇ ಪ್ರಖ್ಯಾತ ಕ್ಷೇತ್ರವನ್ನು ನೋಡಿದರೂ ಮೂಲದಲ್ಲಿ ಆರಾಧಿಸಲ್ಪಡುತ್ತಿದ್ದ ಕಲ್ಲು, ಮರ ಯಾ ಜಾಗವನ್ನು ಈಗಲೂ ಸಂರಕ್ಷಿಸಿಕೊಂಡು ಬಂದಿರುವುದನ್ನು ನಾವು ಕಾಣಬಹುದಾಗಿದೆ.
ಯಾವ್ಯಾವುದೋ ಕಾರಣಗಳಿಗಾಗಿ ವಲಸೆ ಹೋದ ಜನರನ್ನು ದೈವಗಳೂ ಬೆಂಬತ್ತಿ ಹೋದವು. ಜನರ ಬೆನ್ನ ಹಿಂದೆ ದೈವಗಳು ಹೋದವೋ ಅಥವಾ ದೈವಗಳನ್ನು ತನ್ನ ಬೆನ್ನ ಹಿಂದೆ ಕಟ್ಟಿಕೊಂಡು ಜನರು ಹೋದರೋ ಎಂದು ನಿಖರವಾಗಿ ಹೇಳಲು ಬರುವುದಿಲ್ಲ. ಮುಂಬೈಯಂತಹ ನಗರಗಳಲ್ಲಿ ವಾಸಿಸುವ ತುಳುವರಲ್ಲೂ ದೈವಾರಾಧನೆ ಬಗ್ಗೆ ಅಪಾರವಾದ ಆಸಕ್ತಿ ಇದೆ. ತುಳುನಾಡಿನ ದೈವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶ ಮುಂತಾದವುಗಳನ್ನು ಮಾಡುವುದರಲ್ಲಿ ಪ್ರಧಾನ ಪಾತ್ರವನ್ನು ಮುಂಬೈಯಲ್ಲಿ ವಾಸಿಸುವ ತುಳುವರೇ ವಹಿಸಿಕೊಳ್ಳುವುದು ಕಂಡು ಬರುತ್ತಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳುಗಳಲ್ಲಿ ಸಾಧಾರಣವಾಗಿ ಮುಂಬೈಯಲ್ಲಿ ವಾಸಿಸುತ್ತಿರುವ ಅರ್ಧಕ್ಕರ್ಧ ತುಳುವರು ತುಳುನಾಡಿಗೆ ಇಳಿಯುತ್ತಾರೆ. ಈ ಸಂದರ್ಭದಲ್ಲಿ ಇಲ್ಲಿ ಕೋಲ, ಬಲಿ, ಜಾತ್ರೆ, ಬ್ರಹ್ಮಕಲಶಗಳ ಸುಗ್ಗಿಯೋ ಸುಗ್ಗಿ.
ತುಳುನಾಡಿನ ದೈವವನ್ನು ಮುಂಬಯಿಗೆ ಕೊಂಡೊಯ್ದವರೂ ಇದ್ದಾರೆ. ಮುಂಬೈನ ಕೆಲವು ಭಾಗಗಳಲ್ಲಿ ಕೋಲ, ನೇಮಗಳೂ ನಡೆಯುತ್ತವೆ. ತುಳುನಾಡಿನ ದೈವಾದಿಗರ ತಂಡ ರೈಲುಗಾಡಿಯನ್ನೇರಿಯೋ, ಬಸ್ಸಿನ ಮೂಲಕವೂ ಮುಂಬೈಗೆ ಹೋಗಿ ನೇಮಾದಿಗಳನ್ನು ನೆರವೇರಿಸಿ ಊರಿನ ದಾರಿ ಹಿಡಿಯುತ್ತವೆ.
ತುಳುನಾಡಿನ ಹಳ್ಳಿಗಳಲ್ಲಿ ಒಂದು ಕಾಲದಲ್ಲಿ ಗುತ್ತಿನ ಗತ್ತಿನಲ್ಲಿ ಮೆರೆದ ಮನೆಗಳಲ್ಲಿ ಈಗ ಯಾವ ಗದ್ದಲವೂ ಇಲ್ಲದೆ ಭವ್ಯ ಮನೆಗಳು ಗೆದ್ದಲು ಹಿಡಿಯುತ್ತಿವೆ. ಪ್ರಾಯಸಂದ ಕೆಲವರು ಇಂತಹಾ ಮನೆಗಳಲ್ಲಿ ಕಂಡು ಬರುತ್ತಿದ್ದಾರೆ. ಯುವಕರು ಹೊಟ್ಟೆಪಾಡಿಗಾಗಿ ದೂರದ ಊರುಗಳನ್ನು ಸೇರಿಕೊಂಡಿದ್ದಾರೆ. ಆದರೂ ದೈವ ಕುಟುಂಬದ ಬೆನ್ನು ಬಿಟ್ಟಿಲ್ಲ. ಮುಂಬೈಯಲ್ಲಿ ವಾಸಿಸುವ ಈ ರೀತಿಯ ಕುಟುಂಬದ ಸದಸ್ಯರು ಓರ್ವ ಹಿರಿಯನನ್ನು ಗುತ್ತಿನ ಯಜಮಾನ ಎಂದು ನೇಮಿಸಿ ಪ್ರತೀ ತಿಂಗಳ ಸಂಕ್ರಮಣದಂದು ಖಚರ್ು ವೆಚ್ಚಗಳ ಮೇಲೆ ಇಂತಿಷ್ಟು ರೂಪಾಯಿ ಎಂದು ನಿಗದಿಪಡಿಸಿ ಊರಿಗೆ ಕಳುಹಿಸಿ ದೈವಗಳಿಗೆ `ಪೂ-ನೀರ್ ಇಡಿಸುವ ಕ್ರಮವೂ ಇದೆ.
ಇದೆಲ್ಲಾ ನೆನಪಾದದ್ದು ಯಾವಾಗ ಎಂದರೆ ಇತ್ತೀಚೆಗೆ ಮಂಗಳೂರು ನಗರದ ಹೃದಯ ಭಾಗವಾದ ಹಂಪನ ಕಟ್ಟೆಯ ನಾಲ್ಕು ಮಹಡಿಯ ಮೇಲೆ ನಾಗಸ್ವರದ ಧ್ವನಿ ಕೇಳಿದಾಗ. ಮಹಡಿ ಮೇಲಿನ ವಿಶಾಲ ಜಾಗದಲ್ಲಿ ಮಂತ್ರದೇವತೆಯ `ಕೊಡಿಯಡಿ' ಸಿದ್ಧವಾಗಿತ್ತು. ದೈವವನ್ನು ಅರಾಧಿಸುವ ಕುಟುಂಬಿಕರು ಮೆಟ್ಟಲುಗಳನ್ನು ಏರಿ ನೇಮದ ಚಾವಡಿಗೆ ಆಗಮಿಸಿದ್ದರು. ಎರಡು ದೈವಗಳ ಕೋಲ ಬ್ಯಾಂಡ್, ವಾದ್ಯ, ಬೆಡಿ, ಗರ್ನಾಲು ಸಹಿತ ವಿಜೃಂಭಣೆಯಿಂದ ನೆರವೇರಿತ್ತು. ಝಗಮಗಿಸುವ ಶೃಂಗಾರ, ಭೂರಿಭೋಜನ ಎಲ್ಲವೂ ನಡೆದಿತ್ತು.
ರಾಜನ್ದೈವಗಳಿಗೆ ನೇಮ ನಡೆಸುವಲ್ಲಿ ಕೆಲವೊಂದು ಕಟ್ಟುಪಾಡುಗಳು ಇರುತ್ತವೆ. ಇವುಗಳ ನೇಮ ನಡೆಯುವ ಜಾಗ, ಸೇರುವ ಜನರು ಇವೆಲ್ಲದರ ಬಗ್ಗೆ ವ್ಯವಸ್ಥಿತವಾದ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಇಂತಹಾ ದೈವಗಳ ನೇಮಗಳನ್ನು ಟೇರೇಸ್ ಮೇಲೆ ನಡೆಸಲು ಬಹುಶಃ ಸಾಧ್ಯವಿಲ್ಲ. ಇನ್ನು ಕಾಲ ಕಳೆದಂತೆ ಅದೂ ಸಾಧ್ಯವಾಗಬಹುದೋ ಏನೋ. ಆದರೆ ಮನೆ ದೈವವಾಗಿ ಆರಾಧಿಸಲ್ಪಡುವ ಮಂತ್ರದೇವತೆ, ಸತ್ಯದೇವತೆಗಳಿಗೆ ಮನೆ ಮತ್ತು ಸಣ್ಣ ಅಂಗಳ ಇದ್ದರೂ ಸಾಧ್ಯವಾಗುತ್ತದೆ.
ಈಗ ಕಾಂಕ್ರೀಟ್ ಕಟ್ಟಡಗಳು ಎದ್ದ ಮಂಗಳೂರು ಹಂಪನ ಕಟ್ಟೆ ಪರಿಸರದಲ್ಲಿ ಒಂದು ಕಾಲದಲ್ಲಿ ನೇಮ, ಕೋಲಗಳು ನಡೆದಿರುವಂತ ಸಾಧ್ಯತೆಗಳು ಇವೆ. ಇಲ್ಲಿದ್ದ ದೈವದ ಕೇಂದ್ರಗಳನ್ನು ಒಡೆದು ತೆಗೆದು ಕಟ್ಟಡಗಳನ್ನು ನಿಮರ್ಿಸಿರಲೂ ಬಹುದು. ಆದರೆ ದೈವ ಎಂಬುದು ನಿದರ್ಿಷ್ಟ ವಸ್ತುಗಳ ಮೇಲೆ ಇರುವಂತಹುಗಳು ಎಂದು ಹೇಳಲು ಬರುವುದಿಲ್ಲ. ಅವುಗಳು ಮಾನವನ ಮನಸ್ಸಿನಲ್ಲಿ ನಾಟಿ ಹೋಗಿರುತ್ತವೆ. ಹಾಗಿರುವಾಗ ಮನುಷ್ಯ ನೆಲ ಬಿಟ್ಟು ಐದು ಮಹಡಿ ಮೇಲೆ ವಾಸಿಸಿದರೂ ದೈವಗಳೂ ಅಲ್ಲಿಗೂ ಬರುತ್ತವೆ ಎಂಬುದಕ್ಕೆ ಹಂಪನಕಟ್ಟೆಯಲ್ಲಿ ನಡೆದ ಟೆರೇಸ್ ಕೋಲ ಸಾಕ್ಷಿ ಎಂದು ಹೇಳಬಹುದೇ?

Saturday, December 19, 2009

ನಾವು-ನಮ್ಮದರ ಬಗ್ಗೆ ಆರೋಗ್ಯಕರ ಸಂಕುಚಿತತೆ ಬೇಕು



ಸಂಕುಚಿತತೆ ಎಂಬುದು ಮಾನಸಿಕ ವ್ಯಾಧಿ ಎಂಬುದು ಎಲ್ಲರೂ ಒಪ್ಪುವಂತದ್ದೇ. ಸಂಕುಚಿತತೆ ತನ್ನ ತನವನ್ನು ಉಳಿಸಿಕೊಳ್ಳುವಲ್ಲಿಯೂ ನೆರವಾಗುತ್ತದೆ. ಆರೋಗ್ಯಕರವಾದ ಸಂಕುಚಿತತೆ ಇಲ್ಲದೇ ಇದ್ದಲ್ಲಿ ನಾವು ನಮ್ಮನ್ನೇ ಕಳೆದುಕೊಂಡು ಬಿಡುವ ಅಪಾಯವಿದೆ. ತುಳು ಭಾಷೆ ಮತ್ತು ನಾಡಿನ ಬಗ್ಗೆ ಆರೋಗ್ಯಕರವಾದ ಸಂಕುಚಿತತೆ ಇಲ್ಲದೇ ಇದ್ದ ಕಾರಣದಿಂದಲೇ ಇದು ತುಳುನಾಡಿಗೆ, ತುಳು ಭಾಷೆಗೆ ದುರ್ಗತಿ ಒದಗಿ ಬಂದಿದೆ ಎಂದರೂ ತಪ್ಪಿಲ್ಲ. ಇದರಿಂದಾಗಿ ತುಳುವನೊಬ್ಬ ತುಳು ಭಾಷೆ, ಸಂಸ್ಕೃತಿ, ನಾಡಿಗಾಗಿ ಮಾತೆತ್ತಿದರೆ ಅದು ಸಂಕುಚಿತ ಮನೋಭಾವನೆ ಎಂದು ಕೆಲವರು ಗುರುತಿಸುವಲ್ಲಿಯವರೆಗೆ ಬಂದು ಮುಟ್ಟಿದೆ.
ಜಗತ್ತಿನ ಇತರ ಭಾಷೆಗಳಿಗೆ ಹೋಲಿಸಿದಲ್ಲಿ ತುಳುವಿಗೆ ಯಾವ ಕೊರತೆಯೂ ಇಲ್ಲ. ಶತಮಾನಗಳ ಇತಿಹಾಸ, ಸ್ವಂತವಾದ ಲಿಪಿ, ಕಾವ್ಯ, ಮುಂತಾದವುಗಳು ತುಳು ಭಾಷೆಗಿದೆ. ವಿದೇಶಿ ಪ್ರವಾಸಿಗರು ಕೂಡಾ ತುಳು ಭಾಷೆಯನ್ನು ಗುರುತಿಸಿದ್ದಾರೆ. ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ಅದು ಯಾವ ಕಾರಣದಿಂದಲೋ ತುಳು ಎಂಬುದು ಗುರುತಿಸಲ್ಪಡಲೇ ಇಲ್ಲ. ಈ ಕಾರಣದಿಂದಾಗಿಯೇ ನಮ್ಮ ರಾಜಕಾರಣಿಗಳಲ್ಲಿ ತುಳು ಪರವಾಗಿ ಮಾತನಾಡುವುದು, ಹೋರಾಡುವುದು, ಸಂಕುಚಿತತೆ ಎಂಬ ಭಾವನೆ ಬಲವಾಗಿ ಬೇರೂರಿ ಹೋಯಿತು. ಕನ್ನಡ ಆಡಳಿತ ಭಾಷೆಯಾಗಿರುವಾಗ ನಾವು ತುಳುವಿಗಾಗಿ ಒಂದು ಮನವಿ ಸಲ್ಲಿಸಿದರೆ ಅದರಿಂದ ತಾನು ಪ್ರತ್ಯೇಕತೆಯ ವಿಷಬೀಜವನ್ನು ಬಿತ್ತುತ್ತಿದ್ದೇನೆ ಎಂದು ಭಾವಿಸಿ ತನ್ನ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆ ಬರುತ್ತದೋ ಎಂಬ ಭಾವನೆಯಿಂದ ತುಳು ಅನಾಥವಾಗಿ ಹೋಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಮೊನ್ನೆ ನಡೆದ ತುಳು ಸಮ್ಮೇಳನದಲ್ಲಿ ನಡೆದ ವಿಚಾರದ ಮಂಥನದಲ್ಲಿ ಈ ಎಲ್ಲಾ ವಿಷಯಗಳು ಸಮಗ್ರ ತುಳುವರಿಗೆ ತಿಳಿದು ಬಂದವು. ತುಳುವಿಗೊಂದು ಮಾನ್ಯತೆ ಕೊಡುವಲ್ಲಿ ರಾಜಕಾರಣಿಗಳು ನೀಡುತ್ತಿರುವ ಕುಂಟು ನೆಪಗಳೇನಿದೆಯೋ ಅದರ ಸತ್ಯಾಸತ್ಯತೆಗಳು ಏನು ಎಂಬುದನ್ನು ಬಿಚ್ಚಿ ನೋಡುವ ಕೆಲಸ ನಡೆಯಿತು. ತುಳುವಿಗೆ ಲಿಪಿ ಇಲ್ಲ ಎಂಬ ನೆಪ ತುಳುವಿಗೆ ಮಾನ್ಯತೆ ನೀಡುವಲ್ಲಿ ವಿಫಲವಾಗಿದೆ ಎಂಬು ವಿಚಾರ ಸರ್ವಥಾ ಸರಿಯಲ್ಲ. ಇಂಗ್ಲಿಷ್ಗೂ ಸ್ವಂತ ಲಿಪಿ ಇಲ್ಲ. ರೋಮನ್ ಲಿಪಿಯಲ್ಲಿ ಅದನ್ನು ಬರೆಯಲಾಗುತ್ತದೆ, ಮಾನ್ಯತೆ ಪಡೆದ ಕೊಂಕಣಿಗೂ ಲಿಪಿ ಇಲ್ಲ ಅದರ ಲಿಪಿಯ ನಿಮರ್ಾಣದ ತಯಾರಿ ನಡೆಯುತ್ತಿದೆ ಎಂಬ ನಗ್ನ ಸತ್ಯ ಎಲ್ಲರೆದುರೂ ತೆರೆದುಕೊಂಡಿತು. ಹಾಗಾದರೆ ಸ್ವಂತ ಲಿಪಿ ಇರುವ ತುಳು ಇವೆಲ್ಲಾ ಭಾಷೆಗಳನ್ನು ಮೀರಿ ನಿಲ್ಲುವುದಿಲ್ಲವೇ? ಆದರೆ ಇದನ್ನು ವ್ಯವಸ್ಥಿತವಾಗಿ ಅರ್ಥಮಾಡಿಸುವಲ್ಲಿ, ಮಾಡಿಕೊಳ್ಳುವಲ್ಲಿ ನಮ್ಮ ರಾಜಕಾರಣಿಗಳು ಸೋತು ಹೋಗಿದ್ದಾರೆ ಎಂದೇ ಹೇಳಬೇಕಾಗುತ್ತದೆ. ತುಳುನಾಡಿನ ರಾಜಕಾರಣಿಗಳೆಲ್ಲರೂ ತುಳು ಸಮ್ಮೇಳನದ ಒಂದೇ ವೇದಿಕೆಯಡಿ ಬಂದು ತುಳುವಿಗೊಂದು ಮಾನ್ಯತೆ ಕೊಡಿಸುವಲ್ಲಿ ಯಾವ ತೊಂದರೆಯೂ ಉದ್ಭವಿಸದು ಎಂದು ಘೋಷಿಸಿದ್ದು ತುಳುವಿಗಿರುವ ತೊಡಕನ್ನು ಒದ್ದು ಓಡಿಸಿದಂತೇ ಆಗಿದೆ.
ತುಳುವನ್ನು ಯಾರೂ ಇಷ್ಟಪಡುವುದಿಲ್ಲ. ತುಳುವರು ಭಾಷೆಯ, ನಾಡಿನ ಬಗ್ಗೆ ಸೋಮಾರಿಗಳು ಎಂಬು ಮಾತನ್ನು ಈ ಬಾರಿಯ ತುಳು ಸಮ್ಮೇಳನ ಸಂಪೂರ್ಣವಾಗಿ ನಿರಾಕರಿಸಿವೆ. ಮೂರು ಲಕ್ಷ ಜನರು ಸೇರಬಹುದು ಎಂಬ ನಿರೀಕ್ಷೆಯನ್ನು ಹುಸಿಮಾಡಿ ಹದಿಮೂರು ಲಕ್ಷ ಜನರ ಸೇರಿ. ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟದ್ದು ತುಳುವರ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಈ ಉತ್ಸಾಹಕ್ಕೆ ರಾಜಕೀಯ ರಹಿತವಾದ ನೇತೃತ್ವವೊಂದು ಸಿಕ್ಕಿದರೆ ಖಂಡಿತವಾಗಿಯೂ `ತುಳುಅಪ್ಪೆ' ಸವರ್ಾಲಂಕೃತ ಭೂಷಿತೆಯಾಗಿ ಮೆರೆದಾಡುತ್ತಾಳೆ.

ತಿತ್ತೀರಿ ಬಿತ್ಲ್ ಮಜಲ್ದ ಪಂತಿ



ಫಲವತ್ತಾದ ತಿತ್ತೀರಿ ಬಿತ್ಲ್ ಮಜಲು ಗದ್ದೆಯಲ್ಲಿ ಕಳೆಹುಲ್ಲು ಬೆಳೆದಿದೆ ಎಂಬ ದೂರು ಗುತ್ತಿನ ಯಜಮಾನನಿಗೆ ಬಂದಿತು. ಆತ ಅದು ಹೇಗಾಯಿತು? ಎಂದು ವಿಚಾರಣೆ ಆರಂಭಿಸಿದ ಪಾಡ್ದನ ಹೀಗಿದೆ.
ತಿತ್ತೀರಿ ಬಿತ್ಲ್ ಮಜಲ್ಡ್ ಪಂತಿ ಎಕರ್್ದ್ಂಡ್ಗೇ.
ದಾಯೆ ಎಮರ್ೆ ದಾಯೆ ಎಮರ್ೆ ಪಂತಿ ಮೇಯಿಜ?
ಇರೆ ಚಾಕಿರ್ದಾಯೆ ಬಲ್ಲ್ಬುಡ್ಜೆಡ ಯಾನ್ ದಾನೊಡು?
ದಾಯೆ ಚಾಕಿರ್ದಾಯ ದಾಯೆ ಚಾಕಿರ್ದಾಯ
ಬಲ್ಲ್ ಬುಡ್ತುಜಾ?
ಇರೆ ಯಜಮಾನ್ದಿ ತೆಲಿ ಮೈತ್ಜೆರ್ಡ ಯಾನ್ ದಾನೋಡು?
ದಾಯೆ ಪೊಣ್ಣೆ, ದಾಯೆ ಪೊಣ್ಣೆ ತೆಲಿ ಮೈತ್ಜಾ?
ಎನ್ನ ಕೈಸಟ್ಟಿ, ಕುಡುಪು ಉದಲ್ ಪತ್ತ್ದ್ಂಡೇ
ಯಾನ್ ದಾನೊಡು?
ದಾಯೆ ಕೋರಿ ದಾಯೆ ಕೋರಿ ಉದಲ್ ಪೆಜ್ಜ್ಜಾ?
ಎನ್ನ ಕೊಕ್ಕು ಬಡ್ಡ್ ಆತ್ಂಡೆ ಯಾನ್ ದಾನೋಡು?
ದಾಯೆ ಆಚಾರಿ, ದಾಯೆ ಆಚಾರಿ ಕೊಕ್ಕು ಕೆತ್ತ್ಜಾ?
ಎನ್ನ ಉಳಿ, ಸುತ್ತೆ ಕಲ್ವೆರ್ ಕೊನೊತೆರೆ
ಯಾನ್ ದಾನೋಡು?
ದಾಯೆ ನಾಯಿ ದಾಯೆ ನಾಯಿ ಕಲ್ಪನ್ ಪತ್ತ್ಜಾ?
ಇರೆ ಒಟ್ಟುಗು ಬೋಂಟೆಗ್ ಬೈದೆನೆ
ಯಾನ್ ದಾನೋಡು?
ತುಳು ಕವಿಯೊಬ್ಬ ರಚಿಸಿದ ಈ ಪಾಡ್ದನವನ್ನು ಬಾಲ್ಯದಲ್ಲಿ ಕೇಳಿದ, ಹಾಡಿದ ನೆನಪಿನಿಂದ ಇಲ್ಲಿ ನೀಡಲಾಗಿದೆ. ಈ ಪಾಡ್ದನದ ಪ್ರಶ್ನೆಗಳ ಸರಮಾಲೆ ಅಪಾರವಾದ ಅರ್ಥವನ್ನು ನೀಡುತ್ತದೆ.
ಹುಲ್ಲು ಮೇಯುವುದು ಎಮ್ಮೆಯ ಕೆಲಸ ಯಾಕೆ ಮೇಯಲಿಲ್ಲ? ಎಂದು ಯಜಮಾನ ಎಮ್ಮೆಯನ್ನು ಕೇಳಿದಾಗ ಕೆಲಸದಾಳು ಹಗ್ಗ ಬಿಡಲಿಲ್ಲ ಎನ್ನುತ್ತದೆ. ಹಗ್ಗ ಯಾಕೆ ಬಿಡಲಿಲ್ಲ? ಎಂದಾಗ ಕೆಲಸದವ ಮನೆಯೊಡತಿ ತೆಲಿನೀರು ಕೊಡಲಿಲ್ಲ ಎನ್ನುತ್ತಾನೆ. ತೆಲಿನೀರು ಯಾಕೆ ಕೊಡಲಿಲ್ಲ? ಎಂದಾಗ ಅನ್ನ ಬಸಿಯಲು ಉಪಯೋಗಿಸುವ ಮರದ `ಕೈಸಟ್ಟಿ' ಮತ್ತು ಬೀಳಲಿನ `ಕುಡುಪು' ಗೆದ್ದಲು ತಿಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಗೆದ್ದಲನ್ನು ಯಾಕೆ ಹೆಕ್ಕಿ ತಿನ್ನಲಿಲ್ಲ? ಎಂದು ಕೋಳಿಯನ್ನು ಕೇಳಿದಾಗ ಕೋಳಿ ನನ್ನ ಕೊಕ್ಕು ಹರಿತವಿಲ್ಲ ಎಂದು ಬಿಂಕವಾಡುತ್ತದೆ. ಕೊಕ್ಕನ್ನು ಬಡಗಿ ಯಾಕೆ ಕೆತ್ತಿ ಹರಿತ ಮಾಡಲಿಲ್ಲ? ಎಂದು ಕೇಳಿದಾಗ ನನ್ನ ಉಳಿ, ಸುತ್ತಿಗೆ ಕಳ್ಳರು ಕದ್ದುಕೊಂಡುಹೋಗಿದ್ದಾರೆ ಎಂದು ದೂರು ಕೊಡುತ್ತಾನೆ. ಕಳ್ಳರನ್ನು ಯಾಕೆ ಹಿಡಿಯಲಿಲ್ಲ? ಎಂದು ನಾಯಿಯನ್ನು ಕೇಳಿದಾಗ ರಾತ್ರಿ ಹಗಲು ತಮ್ಮೊಂದಿಗೆ ಬೇಟೆಗೆ ಬಂದಿದ್ದರಿಂದ ನಾನೇನು ಮಾಡಲು ಸಾಧ್ಯ? ಎಂದು ಕೇಳುತ್ತದೆ. ಈಗ ಗುತ್ತಿನ ಯಜಮಾನನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ತಾನು ಕರ್ತವ್ಯ ಮರೆತು ರಾತ್ರಿ ಹಗಲು ಬೇಟೆಯ ಮೋಜಿನಲ್ಲಿ ಕಾಲ ಕಳೆಯುತ್ತಿರುವ ಬಗ್ಗೆ ಆತನಿಗೆ ನಾಯಿ ಎಚ್ಚರಿಸುತ್ತದೆ.
ನಮ್ಮ ತುಳುನಾಡಿನ ಕತೆಯೂ ಇದಕ್ಕಿಂತೆ ಒಂದು ಹೆಜ್ಜೆ ಮುಂದೆ ಹೋಗಿದೆ. ತಿತ್ತೀರಿ ಬಿತ್ತಿಲಿನ ಹುಲ್ಲನ್ನು ತೆಗೆದು ಫಸಲು ತೆಗೆಯಲು ಯಜಮಾನ ಮುಂದೆ ಯತ್ನಿಸಿದರೂ. ತುಳುನಾಡಿನ ಮಜಲು ಗದ್ದೆಯ ತುಂಬಾ ಕಳೆ ಬೆಳೆದುದನ್ನು ಕಿತ್ತು ಹಾಕಲು ನಾವು ಎಷ್ಟು ಪ್ರಯತ್ನಿಸಿದ್ದೇವೆ ಎಂಬ ಪ್ರಶ್ನೆ ನಮ್ಮೆದುರು ನಿಲ್ಲುತ್ತದೆ.
ಈ ಪಾಡ್ದನದ ಕಾಲದಲ್ಲಿ ಬೇಟೆ ಎಂಬುದು ಮೋಜು ಮಜಾ ಮಾಡುವ ಒಂದು ಸಾಧನವಾಗಿತ್ತು. ಯಜಮಾನ ಕೇವಲ ಬೇಟೆಯ ವ್ಯಸನದಿಂದ ಕರ್ತವ್ಯ ಮರೆತಿದ್ದರಿಂದ ಗುತ್ತಿನಲ್ಲಿ ಹಲವಾರು ಅನಾಹುತಗಳಾದವು. ಇದರ ಅರಿವು ಆತನಿಗೆ ಬಂದಾಗ ಅತ ಎಲ್ಲರನ್ನು ವಿಚಾರಿಸತೊಡಗಿದ ಎಲ್ಲರೂ ಒಂದೊಂದು ಕಾರಣ ಹೇಳಿ ನುಣಿಚಿಕೊಂಡರು. ತಪ್ಪು ನನ್ನದಲ್ಲ ಎನ್ನುತ್ತಾ ಇನ್ನೊಬ್ಬನ ಮೇಲೆ ಹಾಕತೊಡಗಿದರು. ಕೊನೆಗೆ ತಪ್ಪು ಎಂಬ ಮಾಲೆ ಗುತ್ತಿನ ಯಜಮಾಜನ ಕುತ್ತಿಗೆಯನ್ನೇ ಅಲಂಕರಿಸಿಬಿಟ್ಟಿತು!
ಇದು ಒಂದು ಗುತ್ತಿನ ಮನೆಯ ಕತೆಯಾಯಿತು. ಹೆಚ್ಚಿನ ಸಂಘ, ಸಂಸ್ಥೆಗಳು, ವ್ಯವಹಾರ ಕೇಂದ್ರಗಳಿಗೂ ಈ ಪಾಡ್ದನ ಚೆನ್ನಾಗಿ ಒಪ್ಪುತ್ತದೆ. ತಪ್ಪು ಮಾಡುತ್ತಿದ್ದೇವೆ ಎಂದು ಅರಿವಿಗೆ ಬಂದರೂ ತಮ್ಮ ಸ್ವಾರ್ಥಕ್ಕಾಗಿ ತಪ್ಪನ್ನು ಅಪ್ಪಿಕೊಂಡು ಪತನದತ್ತ ಸಾಗುವ ಕಾಯಕಕ್ಕೆ ಯಾರೂ ಏನೂ ಹೇಳುವಂತಿಲ್ಲ. ತುಳುನಾಡಿನ ಸಂಸ್ಕೃತಿ ಹಾಳಾಗಿದೆ, ಹಾಳಾಗುತ್ತಿದೆ ಎಂದು ಹೇಳುವಲ್ಲಿಯೂ ಈ ಪಾಡ್ದನ ಸಕಾಲಿಕವಾಗಿ ಅನ್ವಯಿಸುತ್ತದೆ.
ತುಳುನಾಡಿನ ಜನತೆ ಸಂಸ್ಕೃತಿ ಮರೆತು ಪರ ಸಂಸ್ಕೃತಿಯನ್ನು ಅನುಸರಿಸಿ ದಿನಕ್ಕೊಂದು ರೀತಿಯ ಮೋಜಿನಲ್ಲಿ ಕಾಲ ಕಳೆಯುತ್ತಿರುವಾಗ ಅದು ತಪ್ಪು ಎಂಬ ಅರಿವು ಎಲ್ಲರಿಗೂ ಬರುತ್ತಿದೆ. ಆದರೆ ಇನ್ನೊಬ್ಬನನ್ನು ತೋರಿಸುತ್ತಾ ಹಾಗಾಯಿತು, ಹೀಗಾಯಿತು ಎನ್ನುತ್ತಾ ತಪ್ಪು ಮಾಡುತ್ತ, ಅನುಕರಣೆ ಮಾಡುತ್ತಲೇ ಸಾಗುತ್ತಿದ್ದೇವೆ.
ಹೇಳಿ ಕೇಳಿ ಈಗ ನಾವು ಪ್ರಜಾಪ್ರಭುತ್ವವನ್ನು ಅನುಸರಿಸುತ್ತಿದ್ದೇವೆ. ನಾವೇ ಪ್ರಭುಗಳಾಗಿದ್ದೇವೆ. ತುಳು ಸಂಸ್ಕೃತಿ ಹಾಳಾಗಿದೆ ಎಂದು ನಾವೆಷ್ಟು ಹೇಳಿಕೊಂಡು, ಅಸಮಾಧಾನ, ಕೋಪ, ಬಿಂಕ, ದರ್ಪ, ಅಸಹಾಯಕತೆ ವ್ಯಕ್ತಪಡಿಸಿದರೂ ಹಾಳುಮಾಡಿದ ಪಾಪ ನಮ್ಮ ಬೆನ್ನ ಹಿಂದೇ ನೆರಳಿನಂತೆ ಹಿಂಬಾಲಿಸುತ್ತಿದೆ!

Thursday, December 3, 2009

`ಕಳಸೆ' ಅಕ್ಕಿಯ ಬದಲು `ಪಣವಿ'ಗೆ ಮಾನ್ಯತೆ




ವಿಶ್ವ ತುಳು ಸಮ್ಮೇಳನದ ಲಾಂಛನದಲ್ಲಿ `ಕಳಸೆ' ಎಂದು ತುಳುವಿನಲ್ಲಿ ಕರೆಯಲ್ಪಡುವ ಮಾಪನ ವಸ್ತುವೊಂದು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ತುಳುನಾಡಿನಲ್ಲಿ ಅಕ್ಕಿ, ಭತ್ತ, ಧಾನ್ಯಗಳನ್ನು ಕಳಸೆಯಲ್ಲಿ ಅಳೆದು ಕೊಡಲಾಗುತ್ತಿತ್ತು. ಕಿಲೋಗ್ರಾಂ ಲೆಕ್ಕಪದ್ಧತಿ ಬಂದ ನಂತರ ಕಳಸೆಗಳು ವಸ್ತುಸಂಗ್ರಹಾಲಯ ಸೇರಿವೆ.
ಅಕ್ಕಿ ತುಂಬಿ ತುಳುಕುವ ಕಳಸೆಯನ್ನು ತುಳುನಾಡಿನ ಶ್ರೀಮಂತಿಕೆಯ ಸಂಕೇತ ಎಂದು ಭಾವಿಸಲಾಗುತ್ತಿದೆ. ಈ ಅರ್ಥದಿಂದಲೇ ವಿಶ್ವತುಳು ಸಮ್ಮೇಳನದ ಲಾಂಛನದಲ್ಲಿ ಇದನ್ನು ಪ್ರಾಮುಖ್ಯವಾಗಿ ತೋರಿಸಲಾಗಿದೆ. ತುಳುನಾಡು ಅಕ್ಕಿಯಿಂದ ತುಂಬಿ ತುಳುಕುತ್ತಿತ್ತು ಎಂಬುದರ ಸಂಕೇತವೂ ಇದಾಗಿದೆ. ತುಳುನಾಡಿನಾದ್ಯಂತ ಹಚ್ಚ ಹಸಿರಾಗಿ ಕಂಡು ಬರುತ್ತಿದ್ದ ಭತ್ತದ ಗದ್ದೆಗಳು, ಅದರಲ್ಲಿ ಸೊಂಟಕ್ಕೊಂದು ಬಟ್ಟೆ ಸುತ್ತಿಕೊಂಡು ಉಳಿದಂತೆ ಬರಿ ಮೈಯನ್ನು ಸೂರ್ಯನ ಬೆಳಕಿಗೆ ಒಡ್ಡುತ್ತಾ ಮೈಮುರಿದು ದುಡಿಯುತ್ತಿದ್ದ ರೈತರು. ಇದೆಲ್ಲಾ ಐದು ದಶಕಗಳ ಹಿಂದಿನ ತುಳುನಾಡಿನ ಚಿತ್ರಣವಾಗಿತ್ತು. ಅಂದು ತುಳುನಾಡಿನ ಅಂಗಡಿ ಮುಂಗಟ್ಟುಗಳಲ್ಲಿ ಅಕ್ಕಿಮುಡಿಯ ಅಟ್ಟಿ ಕಂಡು ಬರುತ್ತಿದ್ದವು. `ಬೋರಿಗಾಡಿ'ಗಳಲ್ಲಿ ಅಕ್ಕಿಯ ಮುಡಿಯ ಸಾಗಾಟವಾಗುತ್ತಿತ್ತು. 1907ರಲ್ಲಿ ಆರಂಭವಾದ ಮಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದ ಗೂಡ್ಸ್ ರೈಲುಗಳಲ್ಲಿ ಅಕ್ಕಿಮುಡಿಯ ಅಟ್ಟಿಗಳು ಹೊರಪ್ರದೇಶಗಳಿಗೆ ಸಾಗಾಟವಾಗುತ್ತಿದ್ದ ಚಿತ್ರ ಬಾಸೆಲ್ ಮಿಷನ್ ನ ಚಿತ್ರಸಂಗ್ರಹದಲ್ಲಿದೆ. ಒಂದು ಕಾಲದಲ್ಲಿ ತುಳುನಾಡು ಅಕ್ಕಿಯಿಂದ ತುಂಬಿ ತುಳುಕುತ್ತಿತ್ತು ಎಂಬುದಕ್ಕೆ ಇಂತಹ ಅನೇಕ ನಿದರ್ಶನಗಳು ಕಂಡು ಬರುತ್ತವೆ.

ವಿಶ್ವಸಮ್ಮೇಳನದ ಲಾಂಛನದಲ್ಲಿ ತುಳುನಾಡನ್ನು ಅತೀ ಹೆಚ್ಚು ಕಾಲ ಆಳಿದ ಆಲೂಪರ ಕಾಲದ `ಪಣವು'ವನ್ನು ತೋರಿಸಲಾಗುತ್ತಿದೆ. ಆದರೆ ಇದು ಕಳಸೆಗಿಂತ ಸಣ್ಣದಾಗಿದ್ದರೂ ಈಗ ತುಳುನಾಡಿನಲ್ಲಿ ತನ್ನ ಪ್ರತಾಪವನ್ನು ಚೆನ್ನಾಗಿ ತೋರಿಸುತ್ತಿದೆ. ಹಣದ ವ್ಯಾಮೋಹಕ್ಕೆ ಬಲಿ ಬಿದ್ದ ಜನತೆ ನಿಧಾನವಾಗಿ ತುಳುನಾಡನ್ನು ಬೃಹತ್ ಕೈಗಾರಿಕೆಗಳ ಕಸದ ತೊಟ್ಟಿಯಾಗುವಂತೆ ಮಾಡುತ್ತಿದ್ದಾರೆ. ತುಳುನಾಡಿನ ಅಕ್ಕಿ ಬೆಳೆದ ಅಮೂಲ್ಯ ಭೂಮಿ ಈಗ ಹಣದಾಸೆಯಿಂದ ಬೃಹತ್ ಕೈಗಾರಿಕೆಗಳಿಗೆ ಮಾರಾಟವಾಗುತ್ತಿದೆ. ಈಗ ತೈಲದ ತೊಟ್ಟಿಗಳಿಂದ ಕಂಗೊಳಿಸುತ್ತಿರುವ ಸುರತ್ಕಲ್ ಸಮೀಪದ ಬಾಳ - ತೋಕೂರು ಗ್ರಾಮಗಳು ಒಂದು ಕಾಲದಲ್ಲಿ ಅಕ್ಕಿಯ ಕಣಜಗಳಾಗಿದ್ದವು.
ಭತ್ತದ ಗದ್ದೆಗಳಿಂದ ನಳನಳಿಸುತ್ತ ಅಕ್ಕಿಯ ತವರೂರಾಗಿದ್ದ ಪಣಂಬೂರು ಆಸು ಪಾಸಿನಲ್ಲಿ ಈಗ ಕಂಡು ಬರುತ್ತಿರುವುದು ಕಲ್ಲಿದ್ದಲು, ಅದುರಿನ ಧೂಳು, ಯೂರಿಯಾದ ಹರಳುಗಳು, ಸಲ್ಫೇಟ್ ಪುಡಿ, ಗ್ರಾನೈಟ್ ಕಲ್ಲುಗಳು, ಮರದ ದಿಮ್ಮಿಗಳು. ನವಮಂಗಳೂರು ಬಂದರು ನಮ್ಮ ನಾಡನ್ನು ಜಗತ್ತಿಗೆ ತೆರೆದು ತೋರಿಸಿದರೂ ತುಳುನಾಡಿನ ಸಾಂಸ್ಕೃತಿಕ ವೈಭವದ ಅಧಃಪತನ ಆರಂಭವಾದದ್ದು ಈ ಬಂದರು ಕಾಯರ್ಾರಂಭ ಮಾಡಿದ ಕ್ಷಣದಿಂದ ಎಂಬುದನ್ನೂ ಮರೆಯುವಂತಿಲ್ಲ. ನಿಧಾನವಾಗಿ ತುಳುನಾಡಿನಲ್ಲಿ ಭತ್ತ ಬೆಳೆದು ಅಕ್ಕಿಯಾಗುತ್ತಿದ್ದ ಪ್ರದೇಶಗಳನ್ನು ಬಂಜರು ಎಂದು ಘೋಷಿಸುತ್ತಾ ಪಣವು ನುಂಗುತ್ತಾ ಸಾಗುತ್ತಿದೆ.
ಈಗ ತುಂಡು ಬಟ್ಟೆಯ ಕಪ್ಪು-ಕರಿಯ ಬಣ್ಣದ ಮೈಯ ರೈತರು ಕಾಣಸಿಗುವುದು ಅಪರೂಪ. ಬಿಳಿ ಬಣ್ಣದ ಠಾಕು ಠೀಕಾದ ಉಡುಪು ತೊಟ್ಟು, ಸೂಟು ಬೂಟು ಹಾಕಿದ ಜನರು ತುಳುನಾಡಿನ ತುಂಬೆಲ್ಲಾ ಓಡಾಡುತ್ತಿದ್ದಾರೆ. ಅವರ ಕಿಸೆಯಲ್ಲಿ `ಪಣವಿ'ನ ಝಣತ್ಕಾರ ಕೇಳಿಸುತ್ತಿದೆ. ಬೆವರು ವಾಸನೆಯ ಬದಲಿಗೆ ಸೆಂಟು, ಪೌಡರು ವಾಸನೆ ಮೂಗಿಗೆ ರಾಚುತ್ತಿದೆ. ಮಾನವನ ಅತೀ ಅವಶ್ಯಕವಾದ ಆಹಾರದ ವಸ್ತು `ಕುಚ್ಚಲು' ಅಕ್ಕಿಯನ್ನು ಹೊರ ಪ್ರದೇಶಗಳಿಗೆ ಸಾಗಾಟ ಮಾಡುತ್ತಿದ್ದ ತುಳುನಾಡಿಗೆ ಹೊರ ಪ್ರದೇಶಗಳ ಬಿಳಿ ಅಕ್ಕಿ ಆಗಮಿಸುತ್ತಿದೆ. ಬರ ಬಂದರೆ ಅಕ್ಕಿಯನ್ನು ಬಿಟ್ಟು ಹಣವನ್ನು ತಿನ್ನಲು ಆಗುವುದಿಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತು. ಕಾಲ ಸತ್ಯ ಒಪ್ಪಿಕೊಳ್ಳದಂತೆ ಮಾಡಿದೆ!