Thursday, December 3, 2009

`ಕಳಸೆ' ಅಕ್ಕಿಯ ಬದಲು `ಪಣವಿ'ಗೆ ಮಾನ್ಯತೆ




ವಿಶ್ವ ತುಳು ಸಮ್ಮೇಳನದ ಲಾಂಛನದಲ್ಲಿ `ಕಳಸೆ' ಎಂದು ತುಳುವಿನಲ್ಲಿ ಕರೆಯಲ್ಪಡುವ ಮಾಪನ ವಸ್ತುವೊಂದು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ತುಳುನಾಡಿನಲ್ಲಿ ಅಕ್ಕಿ, ಭತ್ತ, ಧಾನ್ಯಗಳನ್ನು ಕಳಸೆಯಲ್ಲಿ ಅಳೆದು ಕೊಡಲಾಗುತ್ತಿತ್ತು. ಕಿಲೋಗ್ರಾಂ ಲೆಕ್ಕಪದ್ಧತಿ ಬಂದ ನಂತರ ಕಳಸೆಗಳು ವಸ್ತುಸಂಗ್ರಹಾಲಯ ಸೇರಿವೆ.
ಅಕ್ಕಿ ತುಂಬಿ ತುಳುಕುವ ಕಳಸೆಯನ್ನು ತುಳುನಾಡಿನ ಶ್ರೀಮಂತಿಕೆಯ ಸಂಕೇತ ಎಂದು ಭಾವಿಸಲಾಗುತ್ತಿದೆ. ಈ ಅರ್ಥದಿಂದಲೇ ವಿಶ್ವತುಳು ಸಮ್ಮೇಳನದ ಲಾಂಛನದಲ್ಲಿ ಇದನ್ನು ಪ್ರಾಮುಖ್ಯವಾಗಿ ತೋರಿಸಲಾಗಿದೆ. ತುಳುನಾಡು ಅಕ್ಕಿಯಿಂದ ತುಂಬಿ ತುಳುಕುತ್ತಿತ್ತು ಎಂಬುದರ ಸಂಕೇತವೂ ಇದಾಗಿದೆ. ತುಳುನಾಡಿನಾದ್ಯಂತ ಹಚ್ಚ ಹಸಿರಾಗಿ ಕಂಡು ಬರುತ್ತಿದ್ದ ಭತ್ತದ ಗದ್ದೆಗಳು, ಅದರಲ್ಲಿ ಸೊಂಟಕ್ಕೊಂದು ಬಟ್ಟೆ ಸುತ್ತಿಕೊಂಡು ಉಳಿದಂತೆ ಬರಿ ಮೈಯನ್ನು ಸೂರ್ಯನ ಬೆಳಕಿಗೆ ಒಡ್ಡುತ್ತಾ ಮೈಮುರಿದು ದುಡಿಯುತ್ತಿದ್ದ ರೈತರು. ಇದೆಲ್ಲಾ ಐದು ದಶಕಗಳ ಹಿಂದಿನ ತುಳುನಾಡಿನ ಚಿತ್ರಣವಾಗಿತ್ತು. ಅಂದು ತುಳುನಾಡಿನ ಅಂಗಡಿ ಮುಂಗಟ್ಟುಗಳಲ್ಲಿ ಅಕ್ಕಿಮುಡಿಯ ಅಟ್ಟಿ ಕಂಡು ಬರುತ್ತಿದ್ದವು. `ಬೋರಿಗಾಡಿ'ಗಳಲ್ಲಿ ಅಕ್ಕಿಯ ಮುಡಿಯ ಸಾಗಾಟವಾಗುತ್ತಿತ್ತು. 1907ರಲ್ಲಿ ಆರಂಭವಾದ ಮಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದ ಗೂಡ್ಸ್ ರೈಲುಗಳಲ್ಲಿ ಅಕ್ಕಿಮುಡಿಯ ಅಟ್ಟಿಗಳು ಹೊರಪ್ರದೇಶಗಳಿಗೆ ಸಾಗಾಟವಾಗುತ್ತಿದ್ದ ಚಿತ್ರ ಬಾಸೆಲ್ ಮಿಷನ್ ನ ಚಿತ್ರಸಂಗ್ರಹದಲ್ಲಿದೆ. ಒಂದು ಕಾಲದಲ್ಲಿ ತುಳುನಾಡು ಅಕ್ಕಿಯಿಂದ ತುಂಬಿ ತುಳುಕುತ್ತಿತ್ತು ಎಂಬುದಕ್ಕೆ ಇಂತಹ ಅನೇಕ ನಿದರ್ಶನಗಳು ಕಂಡು ಬರುತ್ತವೆ.

ವಿಶ್ವಸಮ್ಮೇಳನದ ಲಾಂಛನದಲ್ಲಿ ತುಳುನಾಡನ್ನು ಅತೀ ಹೆಚ್ಚು ಕಾಲ ಆಳಿದ ಆಲೂಪರ ಕಾಲದ `ಪಣವು'ವನ್ನು ತೋರಿಸಲಾಗುತ್ತಿದೆ. ಆದರೆ ಇದು ಕಳಸೆಗಿಂತ ಸಣ್ಣದಾಗಿದ್ದರೂ ಈಗ ತುಳುನಾಡಿನಲ್ಲಿ ತನ್ನ ಪ್ರತಾಪವನ್ನು ಚೆನ್ನಾಗಿ ತೋರಿಸುತ್ತಿದೆ. ಹಣದ ವ್ಯಾಮೋಹಕ್ಕೆ ಬಲಿ ಬಿದ್ದ ಜನತೆ ನಿಧಾನವಾಗಿ ತುಳುನಾಡನ್ನು ಬೃಹತ್ ಕೈಗಾರಿಕೆಗಳ ಕಸದ ತೊಟ್ಟಿಯಾಗುವಂತೆ ಮಾಡುತ್ತಿದ್ದಾರೆ. ತುಳುನಾಡಿನ ಅಕ್ಕಿ ಬೆಳೆದ ಅಮೂಲ್ಯ ಭೂಮಿ ಈಗ ಹಣದಾಸೆಯಿಂದ ಬೃಹತ್ ಕೈಗಾರಿಕೆಗಳಿಗೆ ಮಾರಾಟವಾಗುತ್ತಿದೆ. ಈಗ ತೈಲದ ತೊಟ್ಟಿಗಳಿಂದ ಕಂಗೊಳಿಸುತ್ತಿರುವ ಸುರತ್ಕಲ್ ಸಮೀಪದ ಬಾಳ - ತೋಕೂರು ಗ್ರಾಮಗಳು ಒಂದು ಕಾಲದಲ್ಲಿ ಅಕ್ಕಿಯ ಕಣಜಗಳಾಗಿದ್ದವು.
ಭತ್ತದ ಗದ್ದೆಗಳಿಂದ ನಳನಳಿಸುತ್ತ ಅಕ್ಕಿಯ ತವರೂರಾಗಿದ್ದ ಪಣಂಬೂರು ಆಸು ಪಾಸಿನಲ್ಲಿ ಈಗ ಕಂಡು ಬರುತ್ತಿರುವುದು ಕಲ್ಲಿದ್ದಲು, ಅದುರಿನ ಧೂಳು, ಯೂರಿಯಾದ ಹರಳುಗಳು, ಸಲ್ಫೇಟ್ ಪುಡಿ, ಗ್ರಾನೈಟ್ ಕಲ್ಲುಗಳು, ಮರದ ದಿಮ್ಮಿಗಳು. ನವಮಂಗಳೂರು ಬಂದರು ನಮ್ಮ ನಾಡನ್ನು ಜಗತ್ತಿಗೆ ತೆರೆದು ತೋರಿಸಿದರೂ ತುಳುನಾಡಿನ ಸಾಂಸ್ಕೃತಿಕ ವೈಭವದ ಅಧಃಪತನ ಆರಂಭವಾದದ್ದು ಈ ಬಂದರು ಕಾಯರ್ಾರಂಭ ಮಾಡಿದ ಕ್ಷಣದಿಂದ ಎಂಬುದನ್ನೂ ಮರೆಯುವಂತಿಲ್ಲ. ನಿಧಾನವಾಗಿ ತುಳುನಾಡಿನಲ್ಲಿ ಭತ್ತ ಬೆಳೆದು ಅಕ್ಕಿಯಾಗುತ್ತಿದ್ದ ಪ್ರದೇಶಗಳನ್ನು ಬಂಜರು ಎಂದು ಘೋಷಿಸುತ್ತಾ ಪಣವು ನುಂಗುತ್ತಾ ಸಾಗುತ್ತಿದೆ.
ಈಗ ತುಂಡು ಬಟ್ಟೆಯ ಕಪ್ಪು-ಕರಿಯ ಬಣ್ಣದ ಮೈಯ ರೈತರು ಕಾಣಸಿಗುವುದು ಅಪರೂಪ. ಬಿಳಿ ಬಣ್ಣದ ಠಾಕು ಠೀಕಾದ ಉಡುಪು ತೊಟ್ಟು, ಸೂಟು ಬೂಟು ಹಾಕಿದ ಜನರು ತುಳುನಾಡಿನ ತುಂಬೆಲ್ಲಾ ಓಡಾಡುತ್ತಿದ್ದಾರೆ. ಅವರ ಕಿಸೆಯಲ್ಲಿ `ಪಣವಿ'ನ ಝಣತ್ಕಾರ ಕೇಳಿಸುತ್ತಿದೆ. ಬೆವರು ವಾಸನೆಯ ಬದಲಿಗೆ ಸೆಂಟು, ಪೌಡರು ವಾಸನೆ ಮೂಗಿಗೆ ರಾಚುತ್ತಿದೆ. ಮಾನವನ ಅತೀ ಅವಶ್ಯಕವಾದ ಆಹಾರದ ವಸ್ತು `ಕುಚ್ಚಲು' ಅಕ್ಕಿಯನ್ನು ಹೊರ ಪ್ರದೇಶಗಳಿಗೆ ಸಾಗಾಟ ಮಾಡುತ್ತಿದ್ದ ತುಳುನಾಡಿಗೆ ಹೊರ ಪ್ರದೇಶಗಳ ಬಿಳಿ ಅಕ್ಕಿ ಆಗಮಿಸುತ್ತಿದೆ. ಬರ ಬಂದರೆ ಅಕ್ಕಿಯನ್ನು ಬಿಟ್ಟು ಹಣವನ್ನು ತಿನ್ನಲು ಆಗುವುದಿಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತು. ಕಾಲ ಸತ್ಯ ಒಪ್ಪಿಕೊಳ್ಳದಂತೆ ಮಾಡಿದೆ!

No comments:

Post a Comment