Tuesday, January 26, 2010

ಕಲ್ಲು, ಮುಳ್ಳು ಕಾಲಲಿ ಮೆಟ್ಟಿ... ಸ್ವಾಮಿಯೇ ಅಯ್ಯಪ್ಪಾ



ಎರಡು ಮೂರು ದಶಕಗಳ ಹಿಂದೆ ತುಳುನಾಡಿನ ಪ್ರಮುಖ ಪೇಟೆಗಳಲ್ಲಿ `ಕಲ್ಲುಂ, ಮುಳ್ಳುಂ ಕಾಲಿಗೆ ಮೆಟ್ಟಿ.... ಸ್ವಾಮಿಯೇ ಅಯ್ಯಪ್ಪ...' ಎಂಬ ಪಿ. ಕುಪ್ಪುಸ್ವಾಮಿ, ವೀರಮಣಿ ರಾಜು ಮತ್ತಿತರು ಸೇರಿ ಹಾಡಿದ ಕಂಚಿನ ಕಂಠದ ಹಾಡು ಲೌಡ್ ಸ್ಪೀಕರ್ಗಳಲ್ಲಿ ಕೇಳಿ ಬರುತ್ತಿದ್ದವು. ಇದು ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಮಧ್ಯಭಾಗದಲ್ಲಿ ಎತ್ತರವಾದ `ಕಂಗ್'ವೊಂದನ್ನು ನೆಟ್ಟು , ಸುತ್ತಲೂ ಕಾಣುವಂತೆ ಗೋಪುರಾಕೃತಿಯಲ್ಲಿ ಭದ್ರಾಸನ ಅಥವಾ ಹುಲಿಯನೇರಿ ಕುಳಿತ ಮೂರು ಅಯ್ಯಪ್ಪ ಸ್ವಾಮಿಯ ದೊಡ್ಡದಾದ ಭಾವಚಿತ್ರಗಳನ್ನು ಆಳೆತ್ತರದಲ್ಲಿ ಕಟ್ಟಿ, ಧೂಪ, ದೀಪ ಹಚ್ಚಿ, ಹೂಗಳಿಂದ ಅಲಂಕಾರ ಮಾಡಲಾಗುತ್ತಿತ್ತು. ಅದರ ಸುತ್ತಲೂ ಈಗಿನ 16ಗಜಗಳ ಕ್ರಿಕೆಟ್ ಟೂರ್ನಮೆಂಟಿನ ವೃತ್ತಾಕಾರದ ಮೈದಾನದ ಸುತ್ತಳತೆಯಷ್ಟು ಜಾಗದಲ್ಲಿ ಸುಡು ಬಿಸಿಲನ್ನೂ ಲೆಕ್ಕಿಸದೆ ವ್ಯಕ್ತಿಯೊಬ್ಬ ಸೈಕಲ್ ಸವಾರಿ ಮಾಡುತ್ತಾ ನಡುವಿನ ಕಂಬಕ್ಕೆ ಸತತವಾಗಿ ಸುತ್ತು ಬರುತ್ತಿದ್ದ. ಕಂಬಕ್ಕೆ ಕಟ್ಟಿದ್ದ ಮೈಕ್ಗಳು ಅಯ್ಯಪ್ಪ ಸ್ವಾಮಿಯ, ಸ್ಥಳೀಯರಿಗೆ ಅರ್ಥವಾಗದ ಆದರೆ ಅಂದಾಜು ಆಗುವ ತಮಿಳು - ಮಲೆಯಾಳಿ ಭಕ್ತಿ ಗೀತೆಗಳನ್ನು ಹಾಡುತ್ತಿದ್ದವು. ತುಳುನಾಡಿನ ಮಂದಿ ಅಯ್ಯಪ್ಪ ಸ್ವಾಮಿಯ ಬಗ್ಗೆ ಕುತೂಹಲಗೊಂಡು ವಿಚಾರಿಸುತ್ತಿದ್ದರು. ಶಬರಿಮಲೆ ಸನ್ನಿಧಾನಕ್ಕೆ ಹೋಗಿ ಬರುವ ಕಷ್ಟ ಕಾರ್ಪಣ್ಯ, ವೃತ ನಿಯಮಾಧಿಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಕರಿಬಟ್ಟೆ ಉಟ್ಟ ಅಯ್ಯಪ್ಪ ವೃತಧಾರಿ ಸೈಕಲ್ ಬ್ಯಾಲೆನ್ಸ್ ಮಾಡುವ ವ್ಯಕ್ತಿ ನಿಗದಿಪಡಿಸಿದ ದಿನಗಳ ವರೆಗೆ ನೆಲವನ್ನು ಮುಟ್ಟಬಾರದು, ರಾತ್ರಿ ಹಗಲು ಸೈಕಲ್ ಬಿಟ್ಟು ಇಳಿಯಬಾರದು ಎಂಬ ನಿಯಮಗಳಿದ್ದವು. ಕೆಲವರು ಮಧ್ಯರಾತ್ರಿಯ ಹೊತ್ತಿಗೆ ಸೈಕಲಿಂದ ಇಳಿದಿದ್ದಾನೋ ಇಲ್ಲವೋ ಎಂದು ಇಣುಕಿ ನೋಡಿದಾಗಲೂ ಆತ ಸೈಕಲ್ ಮೆಟ್ಟುತ್ತಾ ಗಾಣದೆತ್ತಿನಂತೆ ಸುತ್ತುತ್ತಲೇ ಇರುತ್ತಿದ್ದ.
ಅಯ್ಯಪ್ಪ ವ್ರತಧಾರಿಯು ಸಣ್ಣ ಪುಟ್ಟ ಸರ್ಕಸ್ಗಳೊಂದಿಗೆ, ಟ್ಯೂಬ್ಲೈಟ್ ಒಡೆಯುವುದು, ತಿನ್ನುವುದು, ಹಲ್ಲಿನಿಂದ ಕಾರು ಬಸ್ಸುಗಳನ್ನು ಎಳೆಯುವುದು, ಹೊಂಡದೊಳಗೆ ಗಂಟೆಗಟ್ಟಲೆ ಉಸಿರುಕಟ್ಟಿ ಕುಳಿತುಕೊಳ್ಳುವುದು ಮುಂತಾದ ಕಠಿಣವಾದ ಸಾಹಸಗಳನ್ನೂ ಮಾಡುತ್ತಿದ್ದ. ಅಯ್ಯಪ್ಪಸ್ವಾಮಿಯ ದಯೆಯಿಂದ ಎಲ್ಲವೂ ಸುಸೂತ್ರವಾಗುತ್ತಿತ್ತು.
ತುಳುನಾಡಿನಲ್ಲಿ ಈಗ ವ್ಯಾಪಕವಾಗಿ ಸಂಭ್ರಮಪೂರ್ವಕವಾಗಿ ನಡೆಯುವ ಮತ್ತು ತುಳುವರು ಉದ್ಯೋಗ ನಿಮಿತ್ತ ಹೋಗಿ ವಾಸಿಸುವ ಮುಂಬೈ, ದೆಹಲಿ, ಸಿಂಗಾಪುರ, ಗಲ್ಫ್ ರಾಜ್ಯಗಳಲ್ಲಿ ನಡೆಸುವ ಅಯ್ಯಪ್ಪ ಸ್ವಾಮಿಯ ಪೂಜೆಗಳಿಗೆ ಈ ಸೈಕಲ್ ಬ್ಯಾಲೆನ್ಸ್ ಮಂದಿಯೇ ಮೂಲ ಪುರುಷರು. ಇದಕ್ಕೆ ಅಂದು ಕೇಳುತ್ತಿದ್ದ, ಇಂದು ಇಲ್ಲದೆ ಪೂತರ್ಿಯಾಗದ `ಕಲ್ಲುಂ ಮುಲ್ಲುಂ ಕಾಲಿಗೆ ಮೆಟ್ಟ್ - ಸ್ವಾಮಿಯೇ ಅಯ್ಯಪ್ಪಾ' ಹಾಡೇ ಸಾಕ್ಷಿಯಾಗಿದೆ.
ಕಲ್ಲುಂ ಮುಳ್ಳುಂ ಹಾಡು ಇಲ್ಲಿನ ಜನರಿಗೆ ಸಾಧಾರಣವಾಗಿ ಅರ್ಥವಾಗುತ್ತಿದ್ದರೂ ಇಂದು ನಡೆಯುವ ಅಯ್ಯಪ್ಪ ಪೂಜೆಗಳಲ್ಲಿ ಹಾಕಲಾಗುವ ಹೊಸ ಹೊಸ ತಮಿಳು - ಮಲೆಯಾಳೆ ಭಾಷೆಯ ಹಾಡುಗಳು ಇಲ್ಲಿನ ಜನರಿಗೆ ಎಷ್ಟು ಅರ್ಥವಾಗುತ್ತದೆ ಎಂಬುದು ಪ್ರಮುಖವಾದ ಪ್ರಶ್ನೆ. ತಮಿಳಿನ `ಕಲ್ಲುಂ ಮುಳ್ಳುಂ ಕಾಲಿಗೆ ಮೆಟ್ಟ್' ಬದಲಿಗೆ ಕನ್ನಡ ಭಾಷೆಯಲ್ಲಿ `ಕಲ್ಲನು ಮುಳ್ಳನು ಕಾಲಲಿ ತುಳಿದು - ಸ್ವಾಮಿಯೇ ಅಯ್ಯಪ್ಪಾ' ಎಂಬ ಹಾಡು ಕೆಲವು ಕಡೆ ಕೇಳಿಬರುತ್ತಿದೆ. ಅಯ್ಯಪ್ಪ ಸ್ವಾಮಿಯ ಪೂಜೆ ತಮಿಳು - ಮಲೆಯಾಳಿ ಹಾಡಿನಿಂದಲೇ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಕೆಲವು ಭಕ್ತರು ಭಾವಿಸುವುದು ಕಂಡು ಬರುತ್ತಿದೆ. ಏಸುದಾಸ್, ರಾಜ್ ಕುಮಾರ್, ಎಸ್ಪಿ ಬಾಲಸುಬ್ರಹ್ಮಣ್ಯಂ ಮೊದಲಾದವರ ಸ್ವರದಲ್ಲಿ ಸುಶ್ರಾವ್ಯವಾದ ಅಯ್ಯಪ್ಪಸ್ವಾಮಿಯ ಕನ್ನಡ ಗೀತೆಗಳು ಬಂದಿದ್ದರೂ ತಮಿಳು - ಮಲೆಯಾಳಿ ಭಾಷೆಯ ಹಾಡುಗಳನ್ನು ಕೇಳದೇ ಇದ್ದರೆ ಕೆಲವು ಭಕ್ತರಿಗೆ ಸಮಾಧಾನವೇ ಇರುವುದಿಲ್ಲ.
ಈ ಬರೆಹ ಭಾಷಾವೈಷಮ್ಯ, ಅಸಹನೆಯನ್ನು ಬಿಂಬಿಸುತ್ತದೆ ಎಂದು ಕೆಲವರು ಭಾವಿಸಬಹುದು. ಆದರೆ ಅಯ್ಯಪ್ಪ ಸ್ವಾಮಿಗಳು ದಿನಂಪ್ರತಿ ಹೇಳಲೇ ಬೇಕಾದ 108 ಶರಣು ಹೇಳುವವುದರಲ್ಲಿ `ಜಾತಿ ಮತ ಬೇದ ಇಲ್ಲತವನೇ..' ಎಂಬಂತಹಾ ಶರಣುಗಳು ಮತ್ತು ಕೆಲವು ಕನ್ನಡ ಭಾಷೆಗೆ ಸಾಮ್ಯವಿರುವ ಶರಣುಗಳು ಸುಲಭವಾಗಿ ಅರ್ಥವಾಗಬಹುದಾದರೂ ಸ್ವತಃ ಕರೆಯುವವರಿಗೇ ಅರ್ಥವಾಗದೇ ಇರುವ ಶರಣುಗಳನ್ನು ಹೇಳುವುದರಿಂದ ಆಗುವ ಪ್ರಯೋಜನಗಳಾದರೂ ಏನು? ಭಜನೆಯಿಂದ ಭಕ್ತಿ ಉಕ್ಕುತ್ತದೆ ಎನ್ನುದರಲ್ಲಿ ಎರಡು ಮಾತಿಲ್ಲ. ಆದರೆ ಭಜನೆ ಹೇಳುವವರಿಗೂ, ಕೇಳುವವರಿಗೂ ಅದರಲ್ಲಿ ಏನು ಅಡಗಿದೆ, ನಾವು ದೇವರನ್ನು ಏನೆಂದು ಅಚರ್ಿಸುತ್ತಿದ್ದೇವೆ, ಯಾವ ದೇವರನ್ನು ಹೆಸರಿನಿಂದ ಕರೆಯುತ್ತಿದ್ದೇವೆ. ಎಂದು ಅರ್ಥವಾದರೆ ತಾನೇ ಮುಕ್ತಿ ದೊರಕುವುದು?

No comments:

Post a Comment