Tuesday, January 26, 2010

ಗ್ರಹಣದೋಷ ತಡೆಗೆ ಕದಿಕೆ



ಗ್ರಹಣದ ದಿನ ಆಸ್ತಿಕರು ಉಪವಾಸ ಮಾಡುತ್ತಾರೆ. ಗ್ರಹಣ ಸಂಭವಿಸುವ ಹೊತ್ತಿನಲ್ಲಿ ಮನೆಯಲ್ಲಿ ಯಾವ ಆಹಾರವನ್ನೂ ತಯಾರಿಸಬಾರದು, ಅನ್ನ, ಪದಾರ್ಥದ ಪಾತ್ರೆಗಳು ಖಾಲಿಯಾಗಿ ಕವಚಿ ಹಾಕಿರಬೇಕು ಎಂಬ ಅಭಿಪ್ರಾಯವಿದ್ದು ಕೆಲವು ಮನೆಗಲ್ಲಿ ಚಾಚೂ ತಪ್ಪದೆ ಈ ಪದ್ಧತಿಯನ್ನು ಪಾಲಿಸುತ್ತಾರೆ. ಆಹಾರ ಪದಾರ್ಥಗಳೇನಾದರೂ ಇದ್ದರೆ ಅದಕ್ಕೆ ಗ್ರಹಣ ದೋಷ ಉಂಟಾಗಿ, ಅದನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ ಎಂಬ ಭಾವನೆ ಇದೆ.
ದಿನನಿತ್ಯ ತಯಾರಿಸುವ ಅಹಾರ ಪದಾರ್ಥಗಳನ್ನೇನೂ ಖಾಲಿ ಮಾಡಬಹುದು ಆದರೆ ಹಾಲು, ಮೊಸರು, ನೀರು ಮುಂತಾದ ಅತೀ ಅವಶ್ಯ ವಸ್ತುಗಳಿಗೆ ಗ್ರಹಣ ದೋಷ ಉಂಟಾಗದಂತೆ ಮಾಡುವ ಉಪಾಯವೇನು? ತುಳು ನಾಡಿನ ಹಳ್ಳಿ ಹಳ್ಳಿಯ ಮನೆಯೊಡತಿಯರಿಗೂ ಈ ಉಪಾಯ ಚೆನ್ನಾಗಿ ಗೊತ್ತಿದೆ. ಅಂಗಳದಲ್ಲಿ, ಗದ್ದೆಯ ಹುಣಿಯಲ್ಲಿ, ತೋಟದಲ್ಲಿ ಬೆಳೆದ ಕದಿಕೆಯನ್ನು ಹರಿದು ತಂದು ಸಣ್ಣ, ಸಣ್ಣ ಕಟ್ಟುಗಳನ್ನಾಗಿ ಮಾಡಿ ಹಾಲು, ಮೊಸರು, ನೀರು ಮತ್ತು ಮಿಕ್ಕುಳಿದ ಆಹಾರ ಪದಾರ್ಥಗಳಲ್ಲಿ ಹಾಕುತ್ತಾರೆ. ಕೈತುಂಬಾ ಗರಿಕೆಯನ್ನು ಹಿಡಿದು ಕೊಂಡರೆ ಗ್ರಹಣ ಕಾಲದಲ್ಲಿ ಗಭರ್ಿಣಿ ಮಹಿಳೆಯರಿಗೆ ಗ್ರಹಣ ದೋಷವಾಗುವುದಿಲ್ಲ ಎಂಬ ಭಾವನೆಯೂ ಇದೆ.
ತುಳು ನಾಡಿನ ಹಳ್ಳಿಗಳಲ್ಲಿ ಕದಿಕೆ ಧಾರಾಳವಾಗಿ ಸಿಗುತ್ತದೆ. ಗಣಪತಿಗೂ ಇದು ಬಲು ಪ್ರಿಯ. ಕದಿಕೆ ಆಯುವರ್ೇದ ಔಷಧಿಯಾಗಿಯೂ ಉಪಯೋಗಿಸಲ್ಪಡುತ್ತದೆ. ಗರಿಕೆಯ ಜ್ಯೂಸ್ ನಿದರ್ಿಷ್ಟವಾದ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಪೂಜೆ ಪುನಸ್ಕಾರಗಳಲ್ಲಿ ಕದಿಕೆಗೆ ಪ್ರಮುಖ ಸ್ಥಾನವಿದೆ.
ಗ್ರಹಣ ಸಂದರ್ಭದಲ್ಲಿ ಆಹಾರ ಸೇವಿಸಬಾರದು ಎಂಬುದಕ್ಕೆ ವೈಜ್ಞಾನಿಕ ಕಾರಣಗಳಿಲ್ಲ ಎಂದು ಹೇಳಲಾಗುತ್ತದೆ. ಗ್ರಹಣ ಎಂಬುದು ಖಗೋಳ ಕೌತುಕ ಅದನ್ನು ಮೂಢನಂಬಿಕೆಯಿಂದ ನೋಡಬಾರದು. ಆ ದಿನ ಗ್ರಹಣವನ್ನು ನೋಡುತ್ತಾ `ಎಂಜಾಯ್' ಮಾಡಬೇಕು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಗ್ರಹಣ ಸಂದರ್ಭದಲ್ಲಿ ಸಾಮೂಹಿಕ ಭೋಜನ ಏರ್ಪಡಿಸಿ ಆ ಸಂಧರ್ಭದಲ್ಲಿ ಆಹಾರ ಸೇವಿಸಬಾರದು ಎಂದು ಹೇಳುವುದು ಮೂಢನಂಬಿಕೆ ಊಟ ಮಾಡಿದರೆ ಏನೂ ಆಗುವುದಿಲ್ಲ ಎಂದು ಕೆಲವರು ಸಾಬೀತುಪಡಿಸಲು ಪ್ರಯತ್ನಸುತ್ತಾರೆ.
ಗ್ರಹಣ ಸಂದರ್ಭ ಎಂಬುವುದು ಪವಿತ್ರವಾದ ಪರ್ವಕಾಲ ಈ ಕಾಲದಲ್ಲಿ ನಾವು ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಉಪವಾಸವಿದ್ದು ದೇವರ ಸ್ತುತಿಯಲ್ಲಿ ಕಾಲ ಕಳೆಯಬೇಕು. ಇಲ್ಲ ಸಲ್ಲದ ಮೋಜಿನಲ್ಲಿ ಕಳೆಯಬಾರದು ಎಂಬ ಅಭಿಪ್ರಾಯವನ್ನೂ ಆಸ್ತಿಕ ಬಾಂಧವರು ಹೊಂದಿದ್ದಾರೆ. ಗ್ರಹಣ ಎಂಬುದು ಕೆಟ್ಟದ್ದು, ಅಂದು ಅನಿಷ್ಠ ಸಂಭವಿಸುತ್ತದೆ ಎಂದು ಭೀತಿಯಿಂದ ಮನೆಯೊಳಗೇ ಕಾಲ ಕಳೆಯುವವರೂ ಇದ್ದಾರೆ. ಮಾಟ, ಮಂತ್ರ, ಸಾಧನೆ, ಸಿದ್ದಿಗಾಗಿ ಈ ದಿನವನ್ನೂ ಕೆಲವರು ಆರಿಸಿಕೊಳ್ಳುತ್ತಾರೆ.
ಇದೆಲ್ಲಾ ಅವರವರ ಭಾವ, ಭಕ್ತಿಗಳಿಗಾಯಿತು. ತುಳುನಾಡಿನ ಹೆಂಗಳೆಯರು ಕದಿಕೆಯಿಂದ ಗ್ರಹಣ ದೋಷವಾಗದಂತೆ ರಕ್ಷಣೆ ಪಡೆಯುವುದರಲ್ಲಿ ಏನಾದರೂ ವೈಜ್ಞಾನಿಕ ಕಾರಣಗಳಿವೆಯೇ? ಈ ಸಂದರ್ಭದಲ್ಲಿ ಒಂದು ಘಟನೆ ಓದಿದ ನೆನಪು ಬರುತ್ತಿದೆ. ಭಾರತ ಸರಕಾರವು 1998 ರಲ್ಲಿ ಪೋಖ್ರಾನ್ನಲ್ಲಿ ಅಣುಬಾಂಬು ಪರೀಕ್ಷೆ ನಡೆಸಿತು. ನೂರಾರು ಮೀಟರ್ ಆಳದ ಹೊಂಡ ತೋಡುವ ಕೆಲಸ, ಮಿಲಿಟರಿ ವಾಹನಗಳ ಹರಿದಾಟ, ವಿಜ್ಞಾನಿಗಳ ಓಡಾಟ ಎಲ್ಲವನ್ನೂ ಅಮೆರಿಕದ ಗೂಢಾಚಾರ ಉಪಗ್ರಹದ ಹದ್ದುಗಣ್ಣಿನಿಂದ ಯಾವುದೇ ಸಂಶಯ ಬಾರದ ರೀತಿಯಲ್ಲಿ ತಪ್ಪಿಸಿಕೊಂಡು ಪ್ರಯೋಗ ಯಶಸ್ಸು ಪಡೆಯಿತು. ಹಾಗಾದರೆ ಉಪಗ್ರಹದ ಕಣ್ಣಿಗೆ ಮಣ್ಣೆರೆಚಿದ, ಚಟುವಟಿಕೆಗಳನ್ನು ಮರೆಮಾಚಿದ ಅಂಶವಾದರೂ ಯಾವುದು ಎಂದರೆ... ಹುಲ್ಲು!.
ಪೋಖ್ರಾನ್ನ ಪ್ರತಿಯೊಂದು ಚಟುವಟಿಕೆಯೂ `ಥ್ಯಾಚ್ಡ್ರೂಫ್' ಅಂದರೆ ಹುಲ್ಲಿನ ಮರೆಯಲ್ಲಿ ನಡೆಯಿತು. ಅಣುಪರೀಕ್ಷೆಯ ಹೊಂಡಕ್ಕೆ ಹುಲ್ಲಿನ ಚಪ್ಪರ, ಓಡಾಡುವ ಮಿಲಿಟರಿ ವಾಹನಗಳ ಮೇಲೆ ಹುಲ್ಲಿನ ಛಾವಣಿ! ಹುಲ್ಲಿನ ಮರೆಯಲ್ಲಿ ನಡೆಯುವ ಚಟುವಟಿಕೆಗಳನ್ನು ಉಪಗ್ರಹದ ಕಣ್ಣು ಪತ್ತೆಹಚ್ಚದು ಎಂಬುದನ್ನು ಭಾರತೀಯರ ಕಂಡು ಕೊಂಡಿದ್ದರು!.
ಈಗ ಹೇಳಿ ಹುಲ್ಲು ಉಪಗ್ರಹದ ಕಣ್ಣು ತಪ್ಪಿಸಿದಂತೆ ಕದಿಕೆ ಎಂಬ ಪವಿತ್ರ ಹುಲ್ಲು ಗ್ರಹಣದೋಷವನ್ನು ತಪ್ಪಿಸದೇ? ನಾವು ಮೂಢನಂಬಿಕೆ ಎಂದು ಹೀಯಾಳಿಸುವ ಅಂಶಗಳಲ್ಲಿ ಸಂಶೋಧನೆಗೆ ಅರ್ಹವಾದ ವಿಚಾರಗಳು ಸಾಕಷ್ಟಿದೆ.

No comments:

Post a Comment