Tuesday, January 26, 2010

ಇದು ಜಗತ್ತಿನಲ್ಲಿ ಎಲ್ಲೂ ಇಲ್ಲದ ಆಚರಣೆ!

ತುಳುನಾಡಿನಲ್ಲೂ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಜನವರಿ ಒಂದು ಕ್ಯಾಲೆಂಡರಿನ ಹೊಸ ವರ್ಷವಾದರೆ, ತುಳುನಾಡಿನಾದ್ಯಂತ ತುಳು ಹೊಸ ವರ್ಷ ಆರಂಭವಾಗುವುದು ಯುಗಾದಿಗೆ. ಸುಗ್ಗಿ, ಪಗ್ಗು, ಬೇಷ ಎಂಬಿತ್ಯಾದಿಯಾಗಿ ಯುಗಾದಿಯ ನಂತರ ತುಳು ತಿಂಗಳನ್ನು ಲೆಕ್ಕ ಹಾಕಲಾಗುತ್ತದೆ.
ಜನವರಿ ಒಂದರಂದು ಜಗತ್ತಿನ ಯಾವ ಮೂಲೆಯಲ್ಲಿಯೂ ಇಲ್ಲದ ಹೊಸವರ್ಷದ ಅಚರಣೆಯೊಂದು ತುಳುನಾಡಿನಲ್ಲಿ ಇರುವುದು ವಿಚಿತ್ರ. ತುಳು ಭಾಷೆಯಲ್ಲಿ `ಪೊಸ ವೊಸರ್ೊಗು ಅಜ್ಜೆರೆನ್ ಪೊತ್ತಾವುನು' ಎಂದು ಯುವಕರು ಸಂಭ್ರಮದಿಂದ ಹೇಳುತ್ತಾರೆ. ಇತ್ತೀಚೆಗಿನ ವರ್ಷಗಳಲ್ಲಿ ಸತತವಾಗಿ ನಡೆದ ಕೋಮು ಗಲಭೆಯ ಕಾರಣದಿಂದ ಈ ಅಜ್ಜೆರೆನ್ ಪೊತ್ತಾವುನ ಕಾರ್ಯಕ್ರಮಕ್ಕೆ ಪೊಲೀಸರು ಕಡಿವಾಣ ಹಾಕಿ, ರಾತ್ರಿ ಹನ್ನೆರಡು ಗಂಟೆಯ ಒಳಗೆ ಹೊಸವರ್ಷದ ಆಚರಣೆ ಏನಿದ್ದರೂ ಮಾಡಿ ಮುಗಿಸಬೇಕೆಂಬ ಕಟ್ಟಪ್ಪಣೆಯನ್ನು ಹೊರಡಿಸಿ ಸರ್ಪಗಾವಲು ಹಾಕಿದ್ದರು. ಕೆಲವು ಎಸ್ಸೈಗಳು ಸಂದಿ ಗೊಂದಿಗಳಲ್ಲಿ, ಬಸ್ ನಿಲ್ದಾಣಗಳ ಬಳಿ, ಸಾರ್ವಜನಿಕ ಸ್ಥಳಗಳಲ್ಲಿ ವಿರಾಜಮಾನವಾದ `ಅಜ್ಜೆರ್' ಗಳನ್ನು ಅನಾಮತ್ತಾಗಿ ಎತ್ತಿ ಜೀಪಿಗೆ ಹಾಕಿ ಕೊಂಡೊಯ್ದಿದ್ದರು. ಅಜ್ಜೆರೇ ಎದ್ದು ಹೋದ ಮೇಲೆ ಕುಣಿಯುವುದಾದರೂ ಯಾರ ಸುತ್ತ? ಮಾದಕ ಪದಾರ್ಥಗಳನ್ನು ಸೇವಿಸಿ ಯುವಕರು ಮಧ್ಯರಾತ್ರಿಯವರೆಗೆ ಸೂಕ್ಷ್ಮ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಕುಣಿದಾಡುವುದು ಅಪಾಯಕ್ಕೆ ಆಹ್ವಾನವಿತ್ತಂತೆ ಎಂಬುದೂ ಸುಳ್ಳಲ್ಲ.
ಹೊಸ ವರ್ಷಕ್ಕೆ ಮುದುಕನನ್ನು ಸುಡುವ ಒಂದು ಕಾರ್ಯಕ್ರಮ ಹೇಗೆ ಉಂಟಾಯಿತು ಎಂದೇ ತಿಳಿಯುತ್ತಿಲ್ಲ. ಡಿಸೆಂಬರ್ 31ರ ಮುಂಜಾನೆ ಹೊತ್ತಿಗೆ ಸಾಂತಾಕ್ಲಾಸ್ನನ್ನು ಹೋಲುವ ಮುಖವಾಡವನ್ನು ಬೈಹುಲ್ಲು ಇತ್ಯಾದಿ ಸುಲಭವಾಗಿ ದಹನವಾಗುವ ವಸ್ತುಗಳಿಂದ ನಿಮರ್ಿಸಲಾದ ಮುದುಕನ ಪ್ರತಿಕೃತಿಗೆ ಹಾಕಿ ಹಳೇ ಸೂಟು, ಬೂಟು ತೊಡಿಸಿ, ಕೈಗೆ ಒಂದು ಕೋಲು ಕೊಟ್ಟು, ತೂತಾದ ಕನ್ನಡಕ ಹಾಕಿ. ಕೆಲವು ಕಡೆ ಇನ್ನೇನೋ ವಿಕೃತವಾಗಿ ಅಲಂಕಾರ ಮಾಡಿ ಬಸ್ಸ್ಟ್ಯಾಂಡ್ ಮುಂತಾದ ಜನ ಸೇರುವ ಸ್ಥಳಗಳಲ್ಲಿ ಇಡುತ್ತಾರೆ. ಕೆಲವು ಕಡೆ ಈಚಲು ಮರದ ಸೋಗೆಯಿಂದ ಚಪ್ಪರ ಹಾಕಿ ಬಣ್ಣದ ಕಾಗದ, ಬಲೂನ್ಗಳಿಂದ ಅಲಂಕರಿಸುತ್ತಾರೆ. ದೊಡ್ಡ ದೊಡ್ಡ ಸೌಂಡ್ ಬಾಕ್ಸ್ಗಳು ದಿನವಿಡೀ ಕಿವಿಗಡಚಿಕ್ಕುವಂತೆ ಡಿಸ್ಕೋ ಸಂಗೀತಗಳನ್ನು ಹೊರಹೊಮ್ಮಿಸುತ್ತಿರುತ್ತವೆ.
ಸಂಜೆಯಾಗುತ್ತಿದ್ದಂತೆ ಈ ಮುದುಕ ಪ್ರತಿಕೃತಿಯ ಸುತ್ತ ಸೇರಿದ ಯುವಕರು ನೃತ್ಯಗಳಲ್ಲಿ ತೊಡಗುತ್ತಾರೆ. ಹೊಸ ವರ್ಷದ ಪ್ರಯುಕ್ತ ಲಕ್ಕಿಡಿಪ್ ಡ್ರಾ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಮಧ್ಯರಾತ್ರಿಯವರೆಗೆ ಕುಣಿದು ಕುಪ್ಪಳಿಸಿದ ಯುವಕರು ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಮುದುಕನ ಪ್ರತಿಕೃತಿಗೆ ಬೆಂಕಿಯನ್ನು ಹಚ್ಚುತ್ತಾರೆ. ಪ್ರತಿಕೃತಿಯ ಒಳಗೆ ಮೊದಲೇ ಸಿಡಿಮದ್ದುಗಳನ್ನು ಇಟ್ಟಿದ್ದರಿಂದ ಅದಕ್ಕೆ ಬೆಂಕಿ ಹತ್ತಿ ಸ್ಪೋಟದ ಸದ್ದಿನೊಂದಿಗೆ ಧಗ ಧಗನೆ ಉರಿಯುತ್ತದೆ. ಯುವಕರ ಕೇಕೆ ನರ್ತನ ಮುಗಿಲು ಮುಟ್ಟುತ್ತದೆ. ಇಲ್ಲಿಗೆ ಹಳೆ ವರ್ಷ ಎಂಬ ಮುದುಕನನ್ನು ಸುಟ್ಟ ಸಂತೃಪ್ತಿ ಉಂಟಾಗುತ್ತದೆ. ಕೆಲವು ಕಡೆ ಮುಂಜಾನೆಯವರೆಗೂ ಡ್ಯಾನ್ಸ್ ಕಾರ್ಯಕ್ರಮ ಮುಂದುರಿಯುವುದುಂಟು.
ಹಳೆಯದನ್ನು ಮರೆತು ಅದರ ಅನುಭವದಿಂದ ಹೊಸತನ್ನು ಸ್ವಾಗತಿಸಬೇಕು ಎಂಬ ಆಶಯವೇನೋ ಸರಿಯಾದುದೇ. ಆದರೆ ಹಳೆಯದನ್ನ ಮುದುಕನಿಗೆ ಹೋಲಿಸಿ, ವಿಕೃತ ಅಲಂಕಾರಗಳನ್ನು ಮಾಡಿ ಮಾದಕ ಪದಾರ್ಥಗಳನ್ನು ಸೇವಿಸಿ ಕೇಕೆ ಹಾಕಿ ಕುಣಿದು ಹೊಸವರ್ಷಕ್ಕೆ ಕಾಲಿಡುವುದು ಎಷ್ಟು ಸರಿ ಎಂಬುದನ್ನು ಆಲೋಚಿಸಬೇಕಾದ ಅವಶ್ಯಕತೆ ಇದೆ. ಇದು ಪ್ರಾಯಸಂದ ವ್ಯಕ್ತಿಗಳಿಗೆ ಮಾಡುವ ಅವಮಾನವಲ್ಲವೇ? ಹಳೆಯದೆಲ್ಲವನ್ನೂ ಅಜ್ಜನಿಗೆ ಹೋಲಿಸಿ, ಸುಟ್ಟು ಹಿರಿಯನಾಗರಿಕರಿಗೆ ಅಪಮಾನ ಮಾಡುವವರು ತಾವು ಯುವಕರಾಗಿಯೇ ಇರುತ್ತೇವೆ ಎಂದು ಯೋಚಿಸುವುದು ಒಂದು ವಿಪರ್ಯಾಸ.

No comments:

Post a Comment