Tuesday, December 22, 2009

ಬಿಟ್ಟೆನೆಂದರೂ ಬಿಡದು ನಿನ್ನಯ ಮಾಯೆ


ತುಳುನಾಡಿನಲ್ಲಿ ದೈವಾರಾಧನೆ ಪ್ರಕೃತಿ ಪೂಜೆಯ ಪ್ರತೀಕ. ಈಗ ತುಳುನಾಡಿನಲ್ಲಿ ವಿಜೃಂಭಣೆಯಿಂದ ಪಂಚಲೋಹದ ಮುಗ, ಚಿನ್ನ, ಬೆಳ್ಳಿ ಬಿರುದಾವಳಿಗಳಿಂದ ವಿಜೃಂಭಿಸುತ್ತಾ ಆರಾಧಿಸಲ್ಪಡುವ ಹೆಚ್ಚಿನೆಲ್ಲಾ ದೈವಗಳು ನೂರಾರು ವರ್ಷಗಳ ಹಿಂದೆ ಸಾಗಿದರೆ ಕಲ್ಲು, ಮರಗಳಲ್ಲಿ ಅಡಗಿ ತನ್ನ ಮಾಯೆಯನ್ನು ಪ್ರದರ್ಶಿಸುತ್ತಿದ್ದವು. ದೈವಾರಾಧನೆಯ ಯಾವುದೇ ಪ್ರಖ್ಯಾತ ಕ್ಷೇತ್ರವನ್ನು ನೋಡಿದರೂ ಮೂಲದಲ್ಲಿ ಆರಾಧಿಸಲ್ಪಡುತ್ತಿದ್ದ ಕಲ್ಲು, ಮರ ಯಾ ಜಾಗವನ್ನು ಈಗಲೂ ಸಂರಕ್ಷಿಸಿಕೊಂಡು ಬಂದಿರುವುದನ್ನು ನಾವು ಕಾಣಬಹುದಾಗಿದೆ.
ಯಾವ್ಯಾವುದೋ ಕಾರಣಗಳಿಗಾಗಿ ವಲಸೆ ಹೋದ ಜನರನ್ನು ದೈವಗಳೂ ಬೆಂಬತ್ತಿ ಹೋದವು. ಜನರ ಬೆನ್ನ ಹಿಂದೆ ದೈವಗಳು ಹೋದವೋ ಅಥವಾ ದೈವಗಳನ್ನು ತನ್ನ ಬೆನ್ನ ಹಿಂದೆ ಕಟ್ಟಿಕೊಂಡು ಜನರು ಹೋದರೋ ಎಂದು ನಿಖರವಾಗಿ ಹೇಳಲು ಬರುವುದಿಲ್ಲ. ಮುಂಬೈಯಂತಹ ನಗರಗಳಲ್ಲಿ ವಾಸಿಸುವ ತುಳುವರಲ್ಲೂ ದೈವಾರಾಧನೆ ಬಗ್ಗೆ ಅಪಾರವಾದ ಆಸಕ್ತಿ ಇದೆ. ತುಳುನಾಡಿನ ದೈವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶ ಮುಂತಾದವುಗಳನ್ನು ಮಾಡುವುದರಲ್ಲಿ ಪ್ರಧಾನ ಪಾತ್ರವನ್ನು ಮುಂಬೈಯಲ್ಲಿ ವಾಸಿಸುವ ತುಳುವರೇ ವಹಿಸಿಕೊಳ್ಳುವುದು ಕಂಡು ಬರುತ್ತಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳುಗಳಲ್ಲಿ ಸಾಧಾರಣವಾಗಿ ಮುಂಬೈಯಲ್ಲಿ ವಾಸಿಸುತ್ತಿರುವ ಅರ್ಧಕ್ಕರ್ಧ ತುಳುವರು ತುಳುನಾಡಿಗೆ ಇಳಿಯುತ್ತಾರೆ. ಈ ಸಂದರ್ಭದಲ್ಲಿ ಇಲ್ಲಿ ಕೋಲ, ಬಲಿ, ಜಾತ್ರೆ, ಬ್ರಹ್ಮಕಲಶಗಳ ಸುಗ್ಗಿಯೋ ಸುಗ್ಗಿ.
ತುಳುನಾಡಿನ ದೈವವನ್ನು ಮುಂಬಯಿಗೆ ಕೊಂಡೊಯ್ದವರೂ ಇದ್ದಾರೆ. ಮುಂಬೈನ ಕೆಲವು ಭಾಗಗಳಲ್ಲಿ ಕೋಲ, ನೇಮಗಳೂ ನಡೆಯುತ್ತವೆ. ತುಳುನಾಡಿನ ದೈವಾದಿಗರ ತಂಡ ರೈಲುಗಾಡಿಯನ್ನೇರಿಯೋ, ಬಸ್ಸಿನ ಮೂಲಕವೂ ಮುಂಬೈಗೆ ಹೋಗಿ ನೇಮಾದಿಗಳನ್ನು ನೆರವೇರಿಸಿ ಊರಿನ ದಾರಿ ಹಿಡಿಯುತ್ತವೆ.
ತುಳುನಾಡಿನ ಹಳ್ಳಿಗಳಲ್ಲಿ ಒಂದು ಕಾಲದಲ್ಲಿ ಗುತ್ತಿನ ಗತ್ತಿನಲ್ಲಿ ಮೆರೆದ ಮನೆಗಳಲ್ಲಿ ಈಗ ಯಾವ ಗದ್ದಲವೂ ಇಲ್ಲದೆ ಭವ್ಯ ಮನೆಗಳು ಗೆದ್ದಲು ಹಿಡಿಯುತ್ತಿವೆ. ಪ್ರಾಯಸಂದ ಕೆಲವರು ಇಂತಹಾ ಮನೆಗಳಲ್ಲಿ ಕಂಡು ಬರುತ್ತಿದ್ದಾರೆ. ಯುವಕರು ಹೊಟ್ಟೆಪಾಡಿಗಾಗಿ ದೂರದ ಊರುಗಳನ್ನು ಸೇರಿಕೊಂಡಿದ್ದಾರೆ. ಆದರೂ ದೈವ ಕುಟುಂಬದ ಬೆನ್ನು ಬಿಟ್ಟಿಲ್ಲ. ಮುಂಬೈಯಲ್ಲಿ ವಾಸಿಸುವ ಈ ರೀತಿಯ ಕುಟುಂಬದ ಸದಸ್ಯರು ಓರ್ವ ಹಿರಿಯನನ್ನು ಗುತ್ತಿನ ಯಜಮಾನ ಎಂದು ನೇಮಿಸಿ ಪ್ರತೀ ತಿಂಗಳ ಸಂಕ್ರಮಣದಂದು ಖಚರ್ು ವೆಚ್ಚಗಳ ಮೇಲೆ ಇಂತಿಷ್ಟು ರೂಪಾಯಿ ಎಂದು ನಿಗದಿಪಡಿಸಿ ಊರಿಗೆ ಕಳುಹಿಸಿ ದೈವಗಳಿಗೆ `ಪೂ-ನೀರ್ ಇಡಿಸುವ ಕ್ರಮವೂ ಇದೆ.
ಇದೆಲ್ಲಾ ನೆನಪಾದದ್ದು ಯಾವಾಗ ಎಂದರೆ ಇತ್ತೀಚೆಗೆ ಮಂಗಳೂರು ನಗರದ ಹೃದಯ ಭಾಗವಾದ ಹಂಪನ ಕಟ್ಟೆಯ ನಾಲ್ಕು ಮಹಡಿಯ ಮೇಲೆ ನಾಗಸ್ವರದ ಧ್ವನಿ ಕೇಳಿದಾಗ. ಮಹಡಿ ಮೇಲಿನ ವಿಶಾಲ ಜಾಗದಲ್ಲಿ ಮಂತ್ರದೇವತೆಯ `ಕೊಡಿಯಡಿ' ಸಿದ್ಧವಾಗಿತ್ತು. ದೈವವನ್ನು ಅರಾಧಿಸುವ ಕುಟುಂಬಿಕರು ಮೆಟ್ಟಲುಗಳನ್ನು ಏರಿ ನೇಮದ ಚಾವಡಿಗೆ ಆಗಮಿಸಿದ್ದರು. ಎರಡು ದೈವಗಳ ಕೋಲ ಬ್ಯಾಂಡ್, ವಾದ್ಯ, ಬೆಡಿ, ಗರ್ನಾಲು ಸಹಿತ ವಿಜೃಂಭಣೆಯಿಂದ ನೆರವೇರಿತ್ತು. ಝಗಮಗಿಸುವ ಶೃಂಗಾರ, ಭೂರಿಭೋಜನ ಎಲ್ಲವೂ ನಡೆದಿತ್ತು.
ರಾಜನ್ದೈವಗಳಿಗೆ ನೇಮ ನಡೆಸುವಲ್ಲಿ ಕೆಲವೊಂದು ಕಟ್ಟುಪಾಡುಗಳು ಇರುತ್ತವೆ. ಇವುಗಳ ನೇಮ ನಡೆಯುವ ಜಾಗ, ಸೇರುವ ಜನರು ಇವೆಲ್ಲದರ ಬಗ್ಗೆ ವ್ಯವಸ್ಥಿತವಾದ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಇಂತಹಾ ದೈವಗಳ ನೇಮಗಳನ್ನು ಟೇರೇಸ್ ಮೇಲೆ ನಡೆಸಲು ಬಹುಶಃ ಸಾಧ್ಯವಿಲ್ಲ. ಇನ್ನು ಕಾಲ ಕಳೆದಂತೆ ಅದೂ ಸಾಧ್ಯವಾಗಬಹುದೋ ಏನೋ. ಆದರೆ ಮನೆ ದೈವವಾಗಿ ಆರಾಧಿಸಲ್ಪಡುವ ಮಂತ್ರದೇವತೆ, ಸತ್ಯದೇವತೆಗಳಿಗೆ ಮನೆ ಮತ್ತು ಸಣ್ಣ ಅಂಗಳ ಇದ್ದರೂ ಸಾಧ್ಯವಾಗುತ್ತದೆ.
ಈಗ ಕಾಂಕ್ರೀಟ್ ಕಟ್ಟಡಗಳು ಎದ್ದ ಮಂಗಳೂರು ಹಂಪನ ಕಟ್ಟೆ ಪರಿಸರದಲ್ಲಿ ಒಂದು ಕಾಲದಲ್ಲಿ ನೇಮ, ಕೋಲಗಳು ನಡೆದಿರುವಂತ ಸಾಧ್ಯತೆಗಳು ಇವೆ. ಇಲ್ಲಿದ್ದ ದೈವದ ಕೇಂದ್ರಗಳನ್ನು ಒಡೆದು ತೆಗೆದು ಕಟ್ಟಡಗಳನ್ನು ನಿಮರ್ಿಸಿರಲೂ ಬಹುದು. ಆದರೆ ದೈವ ಎಂಬುದು ನಿದರ್ಿಷ್ಟ ವಸ್ತುಗಳ ಮೇಲೆ ಇರುವಂತಹುಗಳು ಎಂದು ಹೇಳಲು ಬರುವುದಿಲ್ಲ. ಅವುಗಳು ಮಾನವನ ಮನಸ್ಸಿನಲ್ಲಿ ನಾಟಿ ಹೋಗಿರುತ್ತವೆ. ಹಾಗಿರುವಾಗ ಮನುಷ್ಯ ನೆಲ ಬಿಟ್ಟು ಐದು ಮಹಡಿ ಮೇಲೆ ವಾಸಿಸಿದರೂ ದೈವಗಳೂ ಅಲ್ಲಿಗೂ ಬರುತ್ತವೆ ಎಂಬುದಕ್ಕೆ ಹಂಪನಕಟ್ಟೆಯಲ್ಲಿ ನಡೆದ ಟೆರೇಸ್ ಕೋಲ ಸಾಕ್ಷಿ ಎಂದು ಹೇಳಬಹುದೇ?

No comments:

Post a Comment