Monday, September 13, 2010

ಬಾಯಲ್ಲಿ ನೀರೂರಿಸುವ ಕಳೆಗಿಡ


`ಪತ್ರೊಡೆ' ಎಂದು ಅಂತಜರ್ಾಲದಲ್ಲಿ ಶೋಧಿಸಿದರೆ ಸಾವಿರಾರು ಸೈಟ್ಗಳು, ಚಿತ್ರಗಳು ತೆರೆದುಕೊಳ್ಳುತ್ತವೆ. ತುಳುನಾಡಿನಲ್ಲಿ ಪ್ರಖ್ಯಾತವಾದ, ಇಲ್ಲಿನ ಪ್ರತಿಯೊಂದು ಮನೆಯವರೂ ವರ್ಷಕ್ಕೊಂದು ಬಾರಿ ಮನೆಯಲ್ಲಿ ತಪ್ಪದೆ ಮಾಡುವ `ತುಳುನಾಡಿನ ತಿಂಡಿ' ಅಷ್ಟೂ ಪ್ರಸಿದ್ಧವಾಗಿದೆ.
ಈ ಪತ್ರೊಡೆಗೆ ಪ್ರಮುಖವಾಗಿ ಬಳಸಲಾಗುವ `ತೇವು' ಅಂದರೆ ಕೆಸು ಮಳೆ ಬಿದ್ದಾಗ ನೀರು, ಕೆಸರು ನಿಲ್ಲುವ ಜಾಗದಲ್ಲಿ ಸೊಕ್ಕಿ ಬೆಳೆಯುವ ಕಳೆಗಿಡ ಎಂದು ಹೇಳಿದರೆ ನಾವು ಮನಸ್ಸಿನಲ್ಲಿ `ಹೌದು' ಎಂದು ಅಂದುಕೊಂಡರೂ, ಪತ್ರೊಡೆಯ ರುಚಿಯ ಅರಿವಿರುವವರು ಬಹಿರಂಗವಾಗಿ ಕೆಸುವಿನ ಘನತೆಗೆ ಕುಂದುಂಟು ಮಾಡಲು ಬಯಸುವುದಿಲ್ಲ.
ಪತ್ರೊಡೆಗೆ ಬಳಸುವ ಕೆಸುವನ್ನು ಸಾಮಾನ್ಯವಾಗಿ ತೋಟದಿಂದ, ಗದ್ದೆಯ ಬದಿಯಿಂದ, ನೀರು ಹರಿದು ಹೋಗುವ ತೋಡಿನ ಎಡೆಯಿಂದ, ಕೆಲವೊಮ್ಮೆ ಕೊಳಚೆ ಗುಂಡಿಯಿಂದಲೂ ಆಯ್ದು ತೆಗೆಯುತ್ತೇವೆ. ಮನೆಯ ಅಕ್ಕಪಕ್ಕದಿಂದ ನಾವೇ ಕೆಸುವನ್ನು ಆರಿಸಲು ಪ್ರಯತ್ನಿಸಿದರೆ ಸಾಮಾನ್ಯವಾಗಿ `ಉತ್ತಮ' ಜಾಗ ಎಂದು ಮನಸ್ಸಿಗನಿಸಿದ ಕಡೆಯಿಂದ ಕೆಸು ಎಲೆಗಳನ್ನು ಕಿತ್ತು ತರುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೆಸು ಎಲ್ಲಿ ಬೆಳೆದಿರುವಂತದ್ದು ಎಂಬ ಮೂಲವನ್ನು ಹುಡುಕಲು ಖಂಡಿತವಾಗಿಯೂ ಹೋಗುವುದಿಲ್ಲ. ಪೇಟೆ ಪಟ್ಟಣಗಳಲ್ಲಿ ಹೂ ಕುಂಡಗಳಲ್ಲಿ ಇತ್ತೀಚೆಗೆ ಕೆಸುವನ್ನು ಬೆಳೆಸುವ ಪರಿಪಾಠ ಆರಂಭವಾಗಿದ್ದರೂ ಅದರಿಂದ ಮಾಡಿದ ಪತ್ರೊಡೆ ಅಷ್ಟು ರುಚಿ ಎನಿಸದು. ಚೆನ್ನಾಗಿ ಬಲಿತ ತಾಜಾ ಕೆಸುವಿನ ಪತ್ರೊಡೆಯ ರುಚಿಯೇ ಬೇರೆ ರೀತಿಯದ್ದಾಗಿರುತ್ತದೆ. ಈ ರೀತಿಯ ಕೆಸು ಸಿಗಬೇಕಾದರೆ ಕೈಕಾಲುಗಳಿಗೆ ಕೆಸರು ಮೆತ್ತಿಸಿಕೊಳ್ಳಲೇ ಬೇಕು.
ಆಹಾರಕ್ಕಾಗಿ ಬಳಸುವ ಇತರ ಎಲ್ಲಾ ತರಕಾರಿ ಸೊಪ್ಪು ಸದೆಗಳ ಕೃಷಿಗಳ ಬಗ್ಗೆ ವಿವಿಧ ಮೂಲಗಳಿಂದ ನಮಗೆ ಮಾಹಿತಿ ಸಿಕ್ಕಿದರೂ `ಕೆಸುವಿನ ಕೃಷಿ' ಎಂಬ ಮಾತು ನಮ್ಮಲ್ಲಿ ಇನ್ನೂ ಬಳಕೆಗೆ ಬಂದಿಲ್ಲ. ಮನೆಯ ಮುಂದೆ ಸೌಂದರ್ಯಕ್ಕಾಗಿ ಬಣ್ಣ ಬಣ್ಣದ ಕೆಸುವಿನ ಗಿಡಗಳನ್ನು ನೆಟ್ಟು ಮನೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಕಂಡು ಬರುತ್ತದೆ. ಆದರೆ ಹಸಿರು ಬಿಟ್ಟು ಅದರ ಮೇಲೆ ಒಂದೇ ಒಂದು ಬಣ್ಣದ ಚುಕ್ಕೆ ಇದ್ದರೂ ಅಂತಹಾ ಕೆಸು ಪತ್ರೊಡೆಗೆ ಯೋಗ್ಯವೆನಿಸುವುದಿಲ್ಲ.
ಪತ್ರೊಡೆಯಲ್ಲಿ ಕೆಸುವಿನ ಎಲೆಯನ್ನು ಮಾತ್ರ ಬಳಸಲಾಗುತ್ತದೆ. ಅದರ ದಂಡನ್ನು ಬಳಸಲಾಗುವುದಿಲ್ಲ. ಹಾಗಿರುವಾಗ ಕೆಸುವಿನ ಎಲೆಯಲ್ಲಿ ಯಾವುದೇ ದೋಷ ಇಲ್ಲ, ಯಾವ ಪ್ರದೇಶದಲ್ಲೂ ಬೆಳೆದ ಕೆಸುವಿನ ಎಲೆಯನ್ನು ಮಾತ್ರ ಉಪಯೋಗಿಸಬಹುದು ಎಂದು ಕೆಲವರು ಸುಮ್ಮನೆ ಸಬೂಬು ಹೇಳುವುದುಂಟು. ಇದು ಮಾನಸಿಕ ಸಮಾಧಾನಕ್ಕಾದರೂ ಎಲೆಗೆ ಯಾಕೆ ದೋಷ ಇಲ್ಲ ಎಂದು ಪ್ರಶ್ನಿಸಿದರೆ ಬರುವ ಉತ್ತರ ತುಂಬಾ ಸ್ವಾರಸ್ಯಕರ. `ಸಂಸಾರದಲ್ಲಿ ಕಮಲದೆಲೆಯಂತೆ ಇರಬೇಕು' ಎಂಬ ಸಾಹಿತ್ಯಿಕ ಮಾತು ಕೂಡಾ ಇಲ್ಲಿ ನೆನಪಿಗೆ ಬರುತ್ತದೆ. ಕಮಲದ ಎಲೆ ಸದಾ ನೀರಿನ ಮೇಲೆ ಇದ್ದರೂ ಒಂದೇ ಒಂದು ನೀರ ಹನಿಯೂ ಅದಕ್ಕೆ ಅಂಟಿರುವುದಿಲ್ಲ. ಎಲೆಯ ಮೇಲೆ ಬಿದ್ದ ನೀರು ಹಾಗೇ ಬಿಂದು ಬಿಂದುಗಳಾಗಿ ಜಾರಿ ಹೋಗುತ್ತದೆ. ಹಾಗೆ ಸಂಸಾರದಲ್ಲಿ ನಾವು ಇದ್ದರೂ ಇಲ್ಲದಂತಿರಬೇಕು ಎಂದು ಹೇಳಲಾಗುತ್ತಿದೆ. ಹಾಗೆಯೇ ಕೆಸುವಿನ ಎಲೆಯ ಮೇಲೂ ನೀರು ನಿಲ್ಲುವುದಿಲ್ಲ. ಹರಿದು ಹೋಗುತ್ತದೆ. ಹಾಗಿರುವಾಗ ಅದರ ಬುಡದಲ್ಲಿರುವ ಕೊಳಚೆ, ಕೊಚ್ಚೆಯ ಸಂಪರ್ಕ ಎಲೆಗೆ ಇರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವು ಭಾಗದಲ್ಲಿ ಬೆಳೆದ ಕೆಸುವಿಗೆ ಕೈ ಹಾಕಿದರೆ ದಿನವಿಡೀ ಕೈ ತುರಿಸಿಕೊಳ್ಳಬೇಕಾಗುತ್ತದೆ.
ತುಳುನಾಡಿನಲ್ಲಿ ಕೆಸುವಿನ ಜತೆ `ತೊಜಂಕ್ ಮತ್ತು ಇತರ ಕೆಲವು ಗಿಡಗಳ ಎಲೆಗಳನ್ನೂ ಪತ್ರೊಡೆ ಮಾಡುವಾಗ ಬಳಸುತ್ತಾರೆ. ಆದರೆ ಇದು ಯಾವುದೂ ನೆಟ್ಟು ಬೆಳೆಸಿದ ಗಿಡಗಳಲ್ಲ. ಕಳೆಗಿಡಗಳೇ. ತೋಟದ ಕಳೆ ಕೀಳುವಾಗ, ಅಂಗಳ ರಿಪೇರಿ ಮಾಡುವಾಗ, ಕಾಲುದಾರಿಯ ಬದಿಯನ್ನು ಸವರುವಾಗ ತೇವು - ತೊಜಂಕಿಗೆ ಎಳ್ಳಷ್ಟೂ ಮರ್ಯಾದೆ ಇರುವುದಿಲ್ಲ. ಇತರ ಕಳೆಗಿಡಗಳೊಂದಿಗೆ ಸೇರಿಕೊಂಡು ತಿಪ್ಪೆ ಸೇರುತ್ತವೆ.

No comments:

Post a Comment