Monday, September 13, 2010

ಅಷ್ಟಮಿಗೆ ಹಿರಿಮಗನ ಅಡವು !


ಅಷ್ಟಮಿಯನ್ನು ತುಳುನಾಡಿನ ಹಳ್ಳಿ ಹಳ್ಳಿಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಖಾಸಗಿಯಾಗಿ ಮನೆ ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಳೆಗಾಲದ ಅಂತಿಮ ಹಂತದಲ್ಲಿ ಈ ಹಬ್ಬವು ಬರುತ್ತದೆ. ಕೆಲವು ಬಾರಿ ಅಷ್ಟಮಿಯ ದಿನಗಳಲ್ಲಿ ಧಾರಾಕಾರ ಮಳೆ ಸುರಿಯುವುದೂ ಇದೆ. ಅಷ್ಟಮಿಯ ದಿನಗಳು ತೀರಾ ಮುಗ್ಗಟ್ಟಿನ ದಿನಗಳು. ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಅಕ್ಕಿ ಮತ್ತಿತರ ಸೊತ್ತುಗಳು ಮುಗಿದಿರುತ್ತವೆ. ಮಳೆಗಾಲ ಬಿರುಸಾದರೆ ಅಷ್ಟಮಿಯ ದಿನಗಳಲ್ಲಿ ತಿಂಡಿ ಮಾಡುವ ಸಲುವಾಗಿ ಒಲೆ ಉರಿಸಲೂ ಕಟ್ಟಿಗೆ ಇಲ್ಲದ ಪರಿಸ್ಥಿತಿ ಎದುರಾಗುವುದುಂಟು. ಅದೇನಿದ್ದರೂ ಅಷ್ಟಮಿಯ ದಿನ ಮೂಡೆ ಮಾಡಲೇ ಬೇಕು ಎಂಬ ಹಟ ಮನೆಯೊಡತಿಯರಲ್ಲಿ ಇರುತ್ತದೆ. ಅಷ್ಟಮಿ ಹಬ್ಬ ಆಚರಿಸಲು ಹಿರಿಮಗನನ್ನು ಊರಿನ ಗುತ್ತಿನವರ, ಶ್ರೀಮಂತರ ಮನೆಯಲ್ಲಿ ಅಡವು ಇಟ್ಟಾದರೂ ಅಕ್ಕಿ ತರುತ್ತಿದ್ದರಂತೆ. ಹೀಗೆ ಅಡವಿಟ್ಟ ಮಗನನ್ನು ಮುಂದಿನ ಶಿವರಾತ್ರಿಯ ದಿನ ಬಿಡಿಸಿಕೊಳ್ಳಲಾಗುತ್ತಿತ್ತಂತೆ!. ಇದು ಹಳೆಯಕಾಲದ ಮಾತು.

ಸಾಮಾನ್ಯವಾಗಿ ಇಲ್ಲಿ ಅಷ್ಟಮಿಯನ್ನು ಮೂರು ದಿವಸಗಳ ಹಬ್ಬವಾಗಿ ಆಚರಿಸುತ್ತಾರೆ. ಅಷ್ಟಮಿಯ ಮುಂಚಿನ ದಿವಸ ರಾತ್ರಿ ಉಪವಾಸ ಆರಂಭಿಸುವ ಕ್ರಮಕ್ಕೆ `ಬೊಲಂಕ್ ಅಥವಾ `ಬಲೊಟ್ಟು ಕುಲ್ಲುನಿ' ಎಂದು ಕರೆಯುತ್ತಾರೆ. ಪ್ರಾದೇಶಿಕವಾಗಿ ಇದನ್ನು ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ. ಆಚರಣೆಯೂ ಭಿನ್ನ ಭಿನ್ನವಾಗಿರುತ್ತದೆ. ಇದನ್ನು ವ್ರತದಲ್ಲಿ ಕುಳಿತುಕೊಳ್ಳುವುದು ಎನ್ನುತ್ತಾರೆ. ಹೆಚ್ಚಿನ ಕಡೆಗಳಲ್ಲಿ ಈ ದಿನ ತುಳುನಾಡಿನ ವಿಶೇಷ ತಿಂಡಿಯಾದ ಪತ್ರೊಡೆಯನ್ನು ಮಾಡುತ್ತಾರೆ. ತಡರಾತ್ರಿ ಹೊಟ್ಟೆತುಂಬಾ ತಿಂಡಿ ತಿಂದು ಉಪವಾಸದ ವೃತವನ್ನು ಆರಂಭಿಸುತ್ತಾರೆ.
`ಅಷ್ಟಮಿ ಪಾಸ' ಅಂದರೆ ಅಷ್ಟಮಿಯ ಉಪವಾಸ ಹಿಡಿಯುವವರಿಗೆ ಅಷ್ಟಮಿ ದಿವಸದ ಚಂದ್ರೋದಯದವರೆಗೆ ಕಠಿಣವಾದ ವ್ರತವಿರುತ್ತದೆ. ಮಧ್ಯಾಹ್ನ ಸೀಯಾಳ ಕುಡಿಯುವ ಕ್ರಮವಿದೆ.
ಈ ನಡುವೆ ಅಷ್ಟಮಿಯ ರಾತ್ರಿ ಊಟಕ್ಕೆ ಬಗೆ ಬಗೆಯ ತಿಂಡಿ ತಿನಸುಗಳು ತಯಾರಾಗುತ್ತವೆ. `ಮೂಡೆ' ಇದರಲ್ಲಿ ಪ್ರಮುಖವಾದದ್ದು, ಹಿಂದಿನ ಕಾಲದಲ್ಲಿ ಹಳ್ಳಿಯ ಮನೆಗಳಲ್ಲಿ ಮೂಡೆಯನ್ನು ಹೆಣೆಯುತ್ತಿದ್ದರು. ಈಗ ಇದು ವಾಣಿಜ್ಯೀಕರಣವಾಗಿದೆ. ಮೂಡೆ ಕಟ್ಟಿ ಮಾರಾಟ ಮಾಡುವುದು ಕೆಲವರ ಕಾಯಕವಾಗಿದೆ. ಮಾರುಕಟ್ಟೆಗಳಲ್ಲಿ ಹತ್ತು ರೂಪಾಯಿಗೆ ಎರಡು ಅಥವಾ ಮೂರು ಮೂಡೆಗಳು ಸಿಗುತ್ತವೆ. ಹಲಸಿನ ಎಲೆಯಿಂದ ಮಾಡಿದ `ಗುಂಡ' ಅಥವಾ `ಕೊಟ್ಟಿಗೆ'ಯಲ್ಲಿ ಅಕ್ಕಿಯ ಹಿಟ್ಟು ಹಾಕಿ ಬೇಯಿಸಿದ ತಿಂಡಿಯನ್ನು ಈ ದಿನ ಮಾಡುತ್ತಾರೆ. `ಸೇಮೆದಡ್ಡೆ', ಹಾಲು ಅಥವಾ ಪಾಯಸವನ್ನು ಸಿಹಿತಿನಿಸಾಗಿ ಮಾಡಲಾಗುತ್ತದೆ. ಹೆಚ್ಚಿನ ಬ್ರಾಹ್ಮಣರ ಮನೆಯಲ್ಲಿ ಉಂಡೆ, ಚಕ್ಕುಲಿ, ಕೋಡು ಬಳೆ ಮುಂತಾದವುಗಳನ್ನು ಮಾಡುತ್ತಾರೆ. ಇದೆಲ್ಲವನ್ನೂ ಮಾಡಿಟ್ಟುಕೊಂಡು ವ್ರತ ಮುಕ್ತಾಯದ ಅವಧಿಯಾದ ಚಂದ್ರೋದಯವನ್ನು ಕಾದು ಕುಳಿತುಕೊಳ್ಳುತ್ತಾರೆ.
ಇತ್ತೀಚಿಗಿನ ದಿನಗಳಲ್ಲಿ ಟಿ.ವಿ ಮುಂತಾದ ಆಧುನಿಕ ಉಪಕರಣಗಳಿಂದಾಗಿ ಜನರು ಮಲಗುವುದೇ ತಡವಾಗಿ. ಟಿ.ವಿಯಲ್ಲಿ ಪ್ರಸಾರವಾಗುವ ಅಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ನೋಡುತ್ತಾ ಕುಳಿತರೆ ಚಂದ್ರೋದಯವಾಗುವುದೇ ಗೊತ್ತಾಗುವುದಿಲ್ಲ. ಹಿಂದಿನ ಕಾಲದ ತುಳುನಾಡಿನಲ್ಲಿ ರಾತ್ರಿ ಕಾಲದಲ್ಲಿ ಬೇಗನೆ ಮಲಗಿ ಬೆಳಗ್ಗೆ ಬೇಗ ಏಳುವುದು ರೂಢಿಯಾಗಿತ್ತು. ಆ ಸಂದರ್ಭದಲ್ಲಿ ಚಂದ್ರೋದಯದವರೆಗೆ ಕಾಯುವುದು ಎಂದರೆ ತುಸು ಕಷ್ಟದ ಕೆಲಸವಾಗಿತ್ತು, ಹಸಿವು ಮತ್ತು ನಿದ್ದೆ ಕಾಡುತ್ತಿತ್ತು. ಇವುಗಳನ್ನು ಹೊಡೆದೋಡಿಸಲು ಭಜನೆ ನಡೆಸುತ್ತಿದ್ದರು. ಇಲ್ಲವಾದಲ್ಲಿ ಮನೆಯ ಹಿರಿಯರು ಸೇರಿ ಚೆನ್ನೆಮಣೆ ಆಟಕ್ಕೆ ರಂಗೇರಿಸುತ್ತಿದ್ದರು. ಕೆಲವರು ಇಸ್ಪೀಟು ಆಟಕ್ಕೂ ಮೊರೆಹೋಗುತ್ತಿದ್ದುದುಂಟು. ರಾತ್ರಿ ಚಂದ್ರ ಕಾಣಿಸಿಕೊಂಡಾಗ ಮನೆಯ ತುಳಸಿಕಟ್ಟೆಯ ಮುಂದೆ ಅಘ್ರ್ಯ ಸಮಪರ್ಿಸಿ ದೈವ-ದೇವರುಗಳಿಗೆ ಬಡಿಸಿ ಉಪವಾಸವನ್ನು ಕೊನೆಗೊಳಿಸಲಾಗುತ್ತಿತ್ತು.
ಮರುದಿನ `ದ್ವಾದಶಿ'(?). ಯಾವಾಗಲೂ ಏಕಾದಶಿಯ ದಿನ ಮರುದಿನ ದ್ವಾದಶಿ ಬಂದರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನವನ್ನು ತುಳುನಾಡಿನಲ್ಲಿ `ದ್ವಾದೇಸಿ' ಎಂದೇ ಕರೆಯುತ್ತಾರೆ. ಅಷ್ಟಮಿಯ ದಿನ ಉಪವಾಸ ಆದುದರಿಂದ ಆ ದಿನ ಏಕಾದಶಿ ಹಾಗಿರುವಾಗ ಅದರ ಮರುದಿನ ದ್ವಾದಶಿ ಆಗಬೇಕಲ್ಲವೇ?. ಈ ದಿನ ಮಧ್ಯಾನ್ನ ಭೂರಿ ಭೋಜನ. ಕೆಲವು ಕಡೆ ಮಾಂಸದ ಊಟವನ್ನೂ ಮಾಡುತ್ತಾರೆ. ಮನೆಯಲ್ಲಿ ಮಾಡಿದ ತಿಂಡಿ ತಿನಸುಗಳನ್ನು ಇತರ ಧರ್ಮದ ಮನೆಗಳಿಗೂ ಹಂಚಿ ಸೌಹಾರ್ದ ಮೆರೆಯುತ್ತಾರೆ.
ಊಟವಾದ ನಂತರ ಊರಿನ ಪ್ರಮುಖ ಕೇಂದ್ರದಲ್ಲಿ ನಡೆಯುವ `ಮೊಸರು ಕುಡಿಕೆ' ಉತ್ಸವಕ್ಕೆ ಹೋಗಲೇ ಬೇಕು. ಅಲ್ಲಿ ನಡೆಯುವ ಮನರಂಜನೆಯಲ್ಲಿ ಪಾಲ್ಗೊಳ್ಳು ಉತ್ಸಾಹ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಮಳೆಗಾಲದಲ್ಲಿ ಯಾವುದೇ ಸಾರ್ವಜನಿಕ ಮನರಂಜನೆ ಕಾರ್ಯಕ್ರಮಗಳು ಇರದೇ ಇದ್ದ ಕಾರಣ ಮೊಸರು ಕುಡಿಕೆ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ.
ಹಿಂದಿನ ಕಾಲದಲ್ಲಿ ಮಧ್ಯಾಹ್ನ ಊಟವಾದ ನಂತರ ಊರಿನ ಯುವಕರು ಸೇರಿಕೊಂಡು `ಮಸುಲುಡಿಕೆ' (ಮೊಸರು ಕುಡಿಕೆ) ಆಚರಿಸುತ್ತಿದ್ದರು. ಸಾಹಸದ ಆಟಗಳನ್ನು ಆಡುತ್ತಿದ್ದರು, ತಪ್ಪಂಗಾಯಿ, ಹಗ್ಗ ಎಳೆಯುವುದು ಮುಂತಾದ ಕ್ರೀಡೆಗಳನ್ನು ಆಡುತ್ತಿದ್ದರು. ಗೆದ್ದವರಿಗೆ ಬಾಳೆ ಹಣ್ಣು, ಸೀಯಾಳದ ಬಹುಮಾನ ಸಿಗುತ್ತಿತ್ತು. ಎತ್ತರ ಪ್ರದೇಶದಲ್ಲಿ ನೇತಾಡಿಸಿದ ಮೊಸರಿನ ಗಡಿಗೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಒಡೆಯುವುದು. ಎತ್ತರವಾದ ಅಡಿಕೆ ಮರದ ತುದಿಯಲ್ಲಿ ಕಟ್ಟಿದ ನಿಧಿಯನ್ನು ತೆಗೆಯುವುದು ಮುಂತಾದ ಸಾಹಸ ಪ್ರದರ್ಶನವಾಗುತ್ತಿತ್ತು, ಕೆಲವು ಪ್ರದೇಶಗಳಲ್ಲಿ ನಡೆಯುತ್ತಿದ್ದ ಇಂತಹಾ ಕಾರ್ಯಕ್ರಮಗಳ ತಾಜಾತನದ ಸಂಭ್ರಮವನ್ನು ಈಗಲೂ ಹಿರಿಯರು ಮೆಲುಕು ಹಾಕುತ್ತಾರೆ. ಈಗೀಗ ಗ್ರೀಸ್ ಸವರಿದ ಕಂಬ ಹತ್ತುವ ಅಪಾಯಕಾರಿ ಆಟದಿಂದ ಕೆಲವರು ಸೊಂಟ ಮುರಿದುಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಊರಿನ ಯುವಕರೇ ಸೇರಿಕೊಂಡು ಮಾದಿರ ಕುಣಿತ, ಹುಲಿ, ಕರಡಿ ಕುಣಿತ, ನಾಟಕ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೆ ಈಗ ನಾಟಕ ತಂಡಗಳನ್ನು ಕರೆಸಿ ನಾಟಕ, ರಸಮಂಜರಿ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಶ್ರೀಕೃಷ್ಣ ವೇಷ ಸ್ಪಧರ್ೆ ಎಲ್ಲೆಡೆ ನಡೆಯುತ್ತಿದೆ.
ತೆಂಗಿನ ಕಾಯಿಗಳನ್ನು ಪರಸ್ಪರ ಘರ್ಷಣೆ ಮಾಡುವ `ತಾರಾಯಿದ ಕಟ್ಟ' ಎಂಬ ತುಳು ಜಾನಪದ ಕ್ರೀಡೆ ಅಷ್ಟಮಿಯ ದಿನಗಳಲ್ಲಿ ನಡೆಯುತ್ತದೆ. ಇದೊಂದು ಜಾನಪದ ಕ್ರೀಡೆಯಾದರೂ ಈ ಆಟದ ಮೇಲೆ ಜೂಜು ಕಟ್ಟಿ ಅಷ್ಟಮಿಯಂತಹಾ ಶುಭ ಸಂದರ್ಭದಲ್ಲಿ ಕಿಸೆ ಖಾಲಿ ಮಾಡಿಕೊಳ್ಳುವ ಪ್ರವೃತ್ತಿಯೂ ಕೆಲವರಿಗೆ ಇರುತ್ತದೆ. ಜೂಜಾಡುವವರಿಗೆ ಸುಖ-ದುಃಖಗಳ ಪರಿವೆಯೇ ಇರುವುದಿಲ್ಲ.

No comments:

Post a Comment