Monday, September 13, 2010

ತುಳುವರ ಸರಳ ಗಣಪ



ಚೌತಿ ಹಬ್ಬ ತುಳುನಾಡಿನ ಮನೆ ಮನೆಯ ಹಬ್ಬವಾಗಿದೆ. ತುಳುವರು ಆರಾಧಿಸುವ ದೈವಗಳು ಚೌತಿ ಹಬ್ಬವನ್ನು ಆಚರಿಸದೇ ಇದ್ದರೆ ಸಹಿಸುವುದಿಲ್ಲ. ಗುತ್ತಿನ ಮನೆ, ದೈವದ ಮನೆ, ದೈವಸ್ಥಾನಗಳಲ್ಲಿ ಚೌತಿ ಹಬ್ಬವನ್ನು ಖಡ್ಡಾಯವಾಗಿ ಆಚರಿಸಬೇಕು. ಕೆಲವೊಂದು ಕಡೆ ಚೌತಿ ದಿನ ಗಣಪತಿ ಪೂಜೆ ಮಾಡಲು ಕಾರಣಾಂತರಗಳಿಂದ ಅಸಾಧ್ಯವಾದರೆ ಮುಂದೊಂದು ದಿನ ಚೌತಿಹಬ್ಬ ಎಂದು ದಿನ ನಿಗದಿ ಮಾಡಿ ಗಣಪತಿಯನ್ನು ಆರಾಧಿಸಲೇ ಬೇಕು. ದೈವಗಳಿಗೆ ಈಶ್ವರನು ಯಜಮಾನನಾದುದರಿಂದ ಗಣಪತಿಗೂ ಮಾನ್ಯತೆ ಬರುತ್ತದೆ.
ಇಲ್ಲಿನ ಮನೆ ಮನೆಗಳಲ್ಲಿ ಚೌತಿಯ ಗಣಪತಿಯನ್ನು ಮೂತರ್ಿಯ ಮೂಲಕ ಆರಾಧಿಸುವುದು ಬಹಳ ಕಡಿಮೆ. ಈಗೀಗ ಗಣಪತಿ ಮೂತರ್ಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಕ್ರಮ ಕೆಲವು ಮನೆಗಳಲ್ಲಿ ಇದ್ದರೂ ವಾಸ್ತವವಾಗಿ ತುಳುವರು ಎಂದು ಕರೆಯಲ್ಪಡುವವರು ಗಣಪತಿಯ ಮೂತರ್ಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿರಲಿಲ್ಲ. ಅವರದೇನಿದ್ದರೂ ಕೃಷಿ ಪರಿಕರಗಳ ಹಿನ್ನೆಲೆಯುಳ್ಳ ಸರಳವಾದ ಗಣಪತಿಯ ಆಚರಣೆ.
ಬತ್ತದಂತೆ ಕಬ್ಬುಕೂಡಾ ತುಳುನಾಡಿನ ಪ್ರಮುಖ ಬೆಳೆಯಾಗಿತ್ತು. ಚೌತಿಯ ದಿನ ಕಬ್ಬನ್ನು ಮನೆಯೊಳಗೆ ತಂದಿಟ್ಟರೆ ಆ ದಿನ ಗಣಪ ಮನೆಗೆ ಬಂದೇ ಬರುತ್ತಾನೆ ಎಂದು ತುಳುವರು ನಂಬುತ್ತಾರೆ. ಯಾಕೆಂದರೆ ಗಣಪ ಕಬ್ಬುಪ್ರಿಯ. ಒಂದು ತುಂಡು ಕಬ್ಬು ಮನೆಯೊಳಗೆ ತಂದು ಚೌತಿ ಆಚರಿಸಿದ ಸಮಾಧಾನ ಪಟ್ಟುಕೊಳ್ಳುವವರೂ ಇದ್ದಾರೆ. ಆದುದರಿಂದ ತುಳುವರ ಮನೆಯೊಳಗೆ ಅಂದು ಕಬ್ಬು ಬಂದೇ ಬರಬೇಕು. ಇಲ್ಲಿನ ಸಂತೆಗಳಲ್ಲಿ ಚೌತಿಯ ಮುಂಚಿನ ದಿನಗಳಲ್ಲಿ ಕಬ್ಬಿನ ಮಾರಾಟ ಭರಾಟೆಯಿಂದ ನಡೆಯುತ್ತದೆ. ಎಲ್ಲಿ ನೋಡಿದರೂ ಕಬ್ಬಿನ ಕಟ್ಟಗಳ ಸಾಲುಗಳು ಕಂಡು ಬರುತ್ತವೆ. ಕಬ್ಬು ಬೆಳೆಸುವ ರೈತರು ಈ ದಿನ ಕಬ್ಬನ್ನು ನೇರವಾಗಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಾರೆ.
ಚೌತಿಯ ಮುಂಚಿನ ದಿನವಾದ ಗೌರಿ ಹಬ್ಬವನ್ನು ತೆನೆ ಹಬ್ಬವನ್ನಾಗಿಯೂ ಕೆಲವು ಕಡೆ ಆಚರಿಸುತ್ತಾರೆ. ಅಂದು ತೆನೆಯನ್ನು ಮನೆ ತುಂಬಿಸುವ ಸಂಭ್ರಮವೂ ಜರಗಿ ಚೌತಿ ಆಚರಣೆಗೆ ಮುನ್ನುಡಿ ಬರೆಯಲಾಗುತ್ತದೆ.
ಗಣಪತಿ ಮೂತರ್ಿ ಪ್ರತಿಷ್ಠಾಪನೆ, ಕಡುಬು, ಮೋದಕ, ಸಿಹಿತಿಂಡಿಗಳ ಸಮರ್ಪಣೆ, ಪೂಜೆ ಮುಂತಾದ ಪದ್ಧತಿಗಳು ತುಳುನಾಡಿನ ಚೌತಿ ಆಚರಣೆಯಲ್ಲಿ ಇರುವುದಿಲ್ಲ. ಕಬ್ಬನ್ನು ಸವರಿ, ಸೀಳುಮಾಡಿ ಒಂದಡಿ ಉದ್ದದಷ್ಟು ಕತ್ತರಿಸಿದ ತುಂಡುಗಳನ್ನು ಚೌಕಾಕಾರದಲ್ಲಿ ಒಂದೆರಡು ಅಡಿ ಅಟ್ಟಿ ಮಾಡಲಾಗುತ್ತದೆ. ಕೆಲವು ಕಡೆ ಈ ಚೌಕಾಕಾರದ ಅಟ್ಟಿಯ ಒಳಗೆ ಕಲಶ ಪ್ರತಿಷ್ಠಾಪಿಸುವುದೂ ಇದೆ. ಅದರ ಮೇಲೆ ಬಾಳೆ ಎಲೆ ಹಾಕಿ ಧಾನ್ಯಗಳಿಂದ ತಯಾರಿಸಿದ ಕಜ್ಜಾಯ, ಅಕ್ಕಿಯ ತೆಲ್ಲವು (ದೋಸೆ) ಬೆಲ್ಲ, ಪೊರಿ (ಹರಳು) ಹಾಕಲಾಗುತ್ತಿದೆ. ಹಿಂದಿನ ಕಾಲದಲ್ಲಿ ಒಲೆಯ ಮಣ್ಣಿನ `ಓಡು' ಇಟ್ಟು ಅದು ಕಾದಾಗ ಅದರ ಮೇಲೆ ಬತ್ತ ಹಾಕಿ ಅರಳಿಸಿ ತಯಾರಿಸಲಾದ `ಪೊದ್ದೊಲು' ವನ್ನು ಗಣಪತಿಗೆ ಸಮಪರ್ಿಸಲಾಗುತ್ತದೆ. ಈಗ ಸುಲಭವಾಗಿ ಅಂಗಡಿಯಲ್ಲಿ ಸಿಗುವ ಹರಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಗಣಪತಿಗೆ ತಯಾರಿಸುವ ಕಜ್ಜಾಯ, ತೆಲ್ಲವುಗಳಿಗೆ ಉಪ್ಪಿನ ನಿಷೇಧವಿದೆ.
ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಹೂಗಳು ಸಿಗುತ್ತವೆ. ಚೌತಿ ಮಳೆಗಾಲದಲ್ಲಿ ಬರುವುದರಿಂದ ಹೂಗಳು ಸಿಗುತ್ತಿರಲಿಲ್ಲ. ಅಂತಹಾ ಸಂದರ್ಭದಲ್ಲಿ `ಪೂ-ಬಿತ್ತ್' ಎಂಬ ವಿಶೇಷವಾದ ಹೂ ಅಂದರೆ ಧಾನ್ಯದ ಮೊಳಕೆಯನ್ನು ಚೌತಿ ಸಂದರ್ಭದಲ್ಲಿ ಬಳಸಲಾಗುತ್ತಿತ್ತು. ವಿಧವಿಧವಾದ ಧಾನ್ಯಗಳನ್ನು ಚೌತಿಗಿಂತ ಒಂದು ವಾರಗಳ ಮುಂಚಿತವಾಗಿ ಬಿತ್ತಿ ಮೊಳಕೆ ಬರಿಸಲಾಗುತ್ತಿತ್ತು. ಇವು ಚೌತಿಯ ದಿನ ಉದ್ದುದ್ದ ಮೊಳಕೆಗಳು ಬಂದಾಗ ಅದನ್ನು ಕಿತ್ತು ತೆಗೆದು ಸೂಡಿ ಕಟ್ಟಿ ಕಬ್ಬಿನ ಗಣಪತಿಯ ಅಲಂಕಾರವನ್ನು ಮಾಡಲಾಗುತ್ತಿತ್ತು. ಈಗಲೂ ಹಳ್ಳಿಯ ಮನೆಗಳಲ್ಲಿ ಕಬ್ಬಿನ ಗಣಪತಿ ಇಡುವವರು ಪೂಬಿತ್ತನ್ನು ಹಾಕುತ್ತಾರೆ. ಪೂಬಿತ್ತ್ನಿಂದ ಕಬ್ಬಿನ ಗಣಪತಿಯನ್ನು ಅಲಂಕಾರ ಮಾಡಲಾಗುತ್ತದೆ. ಇದನ್ನೇ ಹೆಂಗಳೆಯರು ಪ್ರಸಾದವಾಗಿ ಮುಡಿಗೇರಿಸುತ್ತಾರೆ.
ಹೆಚ್ಚಿನ ಕಡೆಗಳಲ್ಲಿ ಮನೆಯ ಚಾವಡಿಯಲ್ಲಿ ಎರಡು ಕಬ್ಬಿನ ಗಣಪತಿಯನ್ನು ಇಡಲಾಗುತ್ತದೆ. ಒಂದು ಗೌರಿ. ಇನ್ನೊಂದು ಗಣಪ. ಮಧ್ಯಾಹ್ನದ ಹೊತ್ತಿಗೆ ಗಣಪನನ್ನು ಅಂಗಳದ ತುಳಸಿ ಕಟ್ಟೆಯ ಬಳಿ ತಂದು ಧೂಪದಿಂದ ಪೂಜಿಸಿ ಪ್ರಾಥರ್ಿಸಲಾಗುತ್ತದೆ. ಆನಂತರ ಗಣಪನನ್ನು ಚಾವಡಿಗೆ ಕೊಂಡೊಯ್ದು ಗೌರಿ-ಗಣಪನಿಗೆ
ಧೂಪದಿಂದ ಪೂಜಿಸಿ ಕೈಮುಗಿದು ಗಣಪನನ್ನು ವಿಸಜರ್ಿಸಿ ಅದರ ಕಬ್ಬನ್ನು ಪ್ರಸಾದರೂಪವಾಗಿ ಸ್ವೀಕರಿಸಲಾಗುತ್ತದೆ. ಗೌರಿಯನ್ನು ಸಂಜೆಯ ಹೊತ್ತಿಗೆ ವಿಸಜರ್ಿಸಲಾಗುತ್ತದೆ.
ಉತ್ತರ ಭಾರತದಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿ ಎಬ್ಬಿಸಲು ತಿಲಕರು ಆರಂಭಿಸಿದ ಗಣೇಶೋತ್ಸವವು ಪ್ರಖ್ಯಾತಿಯನ್ನು ಪಡೆದು ಸ್ವಾತಂತ್ರ್ಯಾ ನಂತರ ನಮ್ಮ ತುಳುನಾಡನ್ನೂ ನಿಧಾನವಾಗಿ ಪ್ರವೇಶಿಸಿತು. ಈಗ ಅಲ್ಲಲ್ಲಿ ಸಾರ್ವಜನಿಕ ಗಣೇಶೋತ್ಸವಗಳು, ವೈಭವದ ಮೆರವಣಿಗೆ, ಗಣೇಶ ವಿಸರ್ಜನೆ ನಡೆಸಲಾಗುತ್ತದೆ. ತುಳುನಾಡಿನಲ್ಲಿ ಇದಕ್ಕೆ ಹೆಚ್ಚು ಕಮ್ಮಿ ಐವತ್ತು ವರ್ಷಗಳ ಇತಿಹಾಸವಿದೆ. ಐವತ್ತನೇ ವರ್ಷದ ಗಣೇಶೋತ್ಸವ, ಇಪ್ಪತ್ತೈದನೇ ವರ್ಷದ ಗಣೇಶೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿದೆ. ಕೆಲವು ಊರುಗಳಲ್ಲಿ ಶಾಂತಿ ಕದಡುವ ಪ್ರಸಂಗಗಳೂ ನಡೆಯುತ್ತಿವೆ.
ಈಗ ಗಣಪ ತುಳುನಾಡಿನ ಮನೆಮನೆಗಳಲ್ಲಿ ಖಾಸಗಿ ಕಬ್ಬಿನ ಗಣಪನಾಗಿ, ಸಾರ್ವಜನಿಕವಾಗಿ ಬೀದಿ ಬೀದಿಗಳಲ್ಲಿ ಬೃಹದಾಕಾರದ ಮೂತರ್ಿಗಳ ರೂಪದಲ್ಲೂ ವಿಜೃಂಭಣೆಯ ಪೂಜೆ ಪಡೆಯುತ್ತಿದ್ದಾನೆ.

No comments:

Post a Comment