Monday, September 13, 2010

ಬಳ್ಳಿಗೂ ಬಯಕೆ!


ಕೃಷಿಕರು ಬೆಳೆ ಬೆಳೆಸಿ ಉಣ್ಣುವವರು. ತಾವು ಬೆಳೆಸುವ ಬೆಳೆ, ಸಾಕುವ ದನ, ಎತ್ತು, ಕೋಣ, ನಾಯಿ, ಬೆಕ್ಕು, ಕೋಳಿ ಮುಂತಾದ ಪ್ರಾಣಿಗಳಿಗೂ ತಮ್ಮಂತೆಯೇ ಆಸೆ ಆಕಾಂಕ್ಷೆಗಳು ಇರುತ್ತವೆ ಎಂದು ಭಾವಿಸುತ್ತಾರೆ. ಬೆಳೆಗಳಿಗೆ ರೋಗ ರುಜಿನಗಳು ಬಂದರೆ ಅವುಗಳೊಂದಿಗೆ ತಾವೂ ಕೊರಗುತ್ತಾರೆ. ಸಾಕು ಪ್ರಾಣಿಗಳು ಸತ್ತು ಹೋದರೆ ಮನೆಯ ಸದಸ್ಯರನ್ನು ಕಳೆದುಕೊಂಡಂತೆ ಕಣ್ಣೀರು ಹಾಕುತ್ತಾರೆ.
ಮಳೆಗಾಲದಲ್ಲಿ ಬೇಸಾಯದ ಜತೆ ತರಕಾರಿ ಕೃಷಿ ಮಾಡುವುದು ರೈತರ ಹವ್ಯಾಸ. ಬೆಂಡೆ, ಅಲಸಂಡೆ, ಹರಿವೆ ಮುಂತಾದವುಗಳನ್ನು ಬೆಳೆಸುತ್ತಾರೆ. ಸೌತೆ, ಕಾಯಿ, ಕುಂಬಳಕಾಯಿ ಚೀನೀ ಕಾಯಿ (ಕೆಂಬುಡೆ) ಸೋರೆಕಾಯಿ, ಹೀರೇಕಾಯಿ ಮುಂತಾದ ಬಳ್ಳಿಗಳು ರೈತರ ಅಂಗಳದಲ್ಲಿ ವಿಶಾಲವಾಗಿ ಹರಡಿ ಸುಂದರವಾಗಿ ಕಾಣುತ್ತವೆ. ಮಳೆಗಾಲದಲ್ಲಿ ಬೆಳೆಸಿದ ಬಳ್ಳಿಗಳು ತುಳುವರ ಸೋನ ಅಥವಾ ಶ್ರಾವಣ ತಿಂಗಳಲ್ಲಿ ಹೂ ಬಿಡುತ್ತವೆ. ಕುಂಬಳ, ಚೀನಿಕಾಯಿ, ಸೋರೆಕಾಯಿಗಳ ಬಳ್ಳಿ ತುಂಬಾ ಹೂವುಗಳು ನಳನಳಿಸಿದರೂ, ಎಲ್ಲವೂ ಮುದುಡಿ, ಉದುರಿ ಹೋಗಿ ಒಂದೇ ಒಂದು ಹೂ ಫಲವಾಗುವ ಲಕ್ಷಣ ಕಂಡು ಬರದೇ ಇದ್ದಾಗ ಮನೆಯ ಯಜಮಾನಿಗೆ ತಕ್ಷಣ ನೆನೆನಪಾಗುವುದು ತುಳುವರ `ಬಯಕೆ' ಅಥವಾ ಸೀಮಂತ ಎಂಬ ಸಂಪ್ರದಾಯ. ಆಕೆ ಬಳ್ಳಿಗೂ ಬಯಕೆ ಹಾಕುವ ತಯಾರಿ ನಡೆಸುತ್ತಾಳೆ.
ಮುಸ್ಸಂಜೆಯ ಹೊತ್ತು ಈ ಬಯಕೆ ಸಂಪ್ರದಾಯವು ನೆರವೇರುತ್ತದೆ. ಬೆಲ್ಲ ಮತ್ತು ಅನ್ನವನ್ನು ಬೆರೆಸಿ ಅದನ್ನು ಚೀನೀ ಕಾಯಿಯ ಎಲೆಯಲ್ಲಿ ಸುರಿದು ಅದನ್ನು ಹುಲ್ಲಿನಿಂದ ಕಟ್ಟಿ ಕೈ ಮುಗಿಯುತ್ತಾರೆ. ಕುಂಬಳ, ಸೋರೆಕಾಯಿಯ ಬಳ್ಳಿಯ ಎಲೆಗೆ ಅನ್ನ ಮತ್ತು ಬೂದಿಯನ್ನು ಹಾಕಿ ಕಟ್ಟಿದರೆ ಬಳ್ಳಿಯ ಬಯಕೆ ಸಂಪ್ರದಾಯ ಮುಗಿಯುತ್ತದೆ.
ಕಾಕತಾಳೀಯವಾಗಿಯೋ ಅಥವಾ ಬಯಕೆಯಿಂದ ತೃಪ್ತಿಗೊಂಡೋ ಬಳ್ಳಿಯಲ್ಲಿ ಮುಂದಿನ ದಿನಗಳಲ್ಲಿ ಹೂವಿನ ಬುಡದಲ್ಲಿ ಪೀಚು ಕಾಯಿಗಳು ಕಾಣಿಸಿಕೊಳ್ಳತೊಡಗುತ್ತಾ ದಿನ ಕಳೆದಂತೆ ಬಳ್ಳಿ ಎಲ್ಲೆಲ್ಲಾ ಹರಡಿದೆಯೋ ಅಲ್ಲಲ್ಲಿ ಕಾಯಿಗಳು ಕಾಣಿಸಿಕೊಂಡು ಅದು ಬೆಳೆಯತೊಡಗುತ್ತವೆ.
ಆಧುನಿಕ ಕೃಷಿ ಪದ್ಧತಿಗಳಲ್ಲಿ ಗಿಡ ನೆಡುವುದಕ್ಕೆ ಮೊದಲು ಮಣ್ಣಿಗೆ ರಾಸಾಯನಿಕ ಗೊಬ್ಬರ, ಹೂ ಬಿಡಲು, ಕಾಯಿ ಭದ್ರವಾಗಲು, ಬೆಳೆಯಲು ಬೇಕಾದ ರಾಸಾಯನಿಕಗಳನ್ನು ಹಾಕಲಾಗುತ್ತದೆ. ಕೊನೆಗೆ ಗಿಡದಿಂದ ಕಾಯಿಯನ್ನು ಕೊಯ್ದಾದ ನಂತರವೂ ಅದು ಕೆಡದಂತೆ ಬಹುಕಾಲ ಇಡಲು ಅಥವಾ ಬೇಗ ಹಣ್ಣಾಗಲು ರಾಸಾಯನಿಕವನ್ನು ಸೂಜಿಯ ಮೂಲಕ ಚುಚ್ಚಲಾಗುತ್ತದೆ. ಈ ಮೂಲಕ ಮನುಷ್ಯನ ದೇಹ ರಾಸಾಯನಿಕಗಳ ಕೂಪವಾಗುತ್ತಿದೆ.
ತರಕಾರಿ ಬಳ್ಳಿಗೂ ತಮ್ಮ ಭಾವನೆಗಳನ್ನು ಧಾರೆ ಎರೆದು ಬೆಳೆ ಬೆಳೆಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬಂದ ನಮ್ಮ ಪೂರ್ವಜರು ನಿಜವಾಗಿಯೂ ಧನ್ಯರು.

No comments:

Post a Comment