Thursday, October 22, 2009

ಪ್ರಾತ್ಯಕ್ಷಿಕೆಯಾಗುವತ್ತ ತುಳುನಾಡಿನ ಬೇಸಾಯ

ತುಳು ಸಂಸ್ಕೃತಿಗೆ ಸಂಬಂಧಪಟ್ಟ ಸಮಾವೇಶಗಳನ್ನು ತುಳುನಾಡಿನಲ್ಲಿ ಮತ್ತು ತುಳುವರು ವಾಸಿಸುವ ಇತರ ಮಹಾನಗರಗಳಲ್ಲಿ ಏರ್ಪಡಿಸುವಾಗ ತುಳು ಮಣ್ಣಿಗೆ ಸಂಬಂಧಪಟ್ಟ ಕೆಲವು ಪ್ರಾತ್ಯಕ್ಷಿಕೆಗಳನ್ನು ಪ್ರದಶರ್ಿಸುವುದು ಒಂದು ವಾಡಿಕೆ. ಇತ್ತೀಚೆಗೆ ಮುಂಬೈ ಮತ್ತು ಬೆಂಗಳೂರಿನಲ್ಲೂ ಇಂತಹಾ ಪ್ರಾತ್ಯಕ್ಷಿಕೆಗಳು ನಡೆದಿದ್ದವು.
ವಿಶ್ವತುಳು ಸಮ್ಮೇಳನದ ಅಂಗವಾಗಿ ತುಳುನಾಡಿನ ಕುಲಕಸುಬು, ಕಲೆ, ಸಂಸ್ಕೃತಿಯ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶನಗಳು `ಅಂದು-ಇಂದು-ಮುಂದು' ಎಂಬ ಹೆಸರಿನಲ್ಲಿ ಈಗ ನಡೆಯುತ್ತಿವೆ. ಈ ಸಂದರ್ಭದಲ್ಲಿ ತುಳುನಾಡಿನಲ್ಲಿ ಒಂದು ಕಾಲದಲ್ಲಿ ವ್ಯಾಪಕವಾಗಿದ್ದ ಈಗ ಅಳಿದು ಹೋಗಿರುವ, ಹೋಗುತ್ತಿರುವ ವಿಷಯಗಳ ಬಗ್ಗೆ ಅಳಿದುಳಿದವರಿಂದ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ. ಪನೆ ಎಂದು ಹೇಳುವ ಏತ, ಮುಡಿಕಟ್ಟುವುದು, ಗಾಣ, ಕುಂಬಾರಿಕೆ ಇತ್ಯಾದಿಗಳು ತುಳುನಾಡಿನಲ್ಲಿ ವ್ಯಾಪಕವಾಗಿದ್ದವು. `ಪನೆ' (ಏತ) ತುಳುನಾಡಿನ ನೀರಾವರಿಯ ಪ್ರಮುಖ ಜೀವಾಳವಾಗಿತ್ತು. ಸುಮಾರು ಮೂರು ದಶಕಗಳ ಹಿಂದೆ ಪನೆಯನ್ನು ಹಳ್ಳಿ ಹಳ್ಳಿಗಳಲ್ಲಿ ಕಾಣಬಹುದಾಗಿತ್ತು.
ಆನಂತರ ಬಂದ ಸೀಮೆ ಎಣ್ಣೆ, ಡೀಸಿಲ್, ವಿದ್ಯುತ್ ಪಂಪುಗಳು `ಪನೆ' ಎಂಬ ಅಚ್ಚಹಳ್ಳಿಯ ತಾಂತ್ರಿಕ ಅಂಶವನ್ನೇ ಮಂಗಮಾಯ ಮಾಡಿಬಿಟ್ಟಿತು. ಪನೆಯ ಹಗ್ಗದಲ್ಲಿ ನೇತಾಡಿ ತಗ್ಗಿಗೆ ಹಾರಿದ ಅಂದಿನ ಚಿಗುರುಮೀಸೆಯ ಯುವಕರು ಮತ್ತು ಯುವತಿಯರು ಈಗ ಮಧ್ಯವಯಸ್ಸನ್ನು ದಾಟಿದ್ದಾರೆ. ಮರಾಯಿಯಲ್ಲಿ ನೀರು ಮಗುಚಿದ ಅನುಭವವುಳ್ಳ ವ್ಯಕ್ತಿಗಳು ಈಗ ವೃದ್ಧರಾಗಿದ್ದಾರೆ. ನಸುಕಿನಲ್ಲಿ ಎದ್ದು ಪನೆ ಎಂಬ ಯಂತ್ರದಲ್ಲಿ ದುಡಿದು ಭತ್ತದ ಗದ್ದೆಗಳಿಗೆ, ತರಕಾರಿ, ಗೆಣಸು ಇತ್ಯಾದಿಗಳಿಗೆ ನೀರುಣಿಸಿ ಬಂಗಾರದ ಬೆಳೆ ತೆಗೆದು ಗಟ್ಟಮುಟ್ಟಾಗಿ ದೇಹವನ್ನು ಬೆಳೆಸಿದ ಸವಿ ನೆನಪುಗಳನ್ನು ಇಂತವರು ಸ್ವಾರಸ್ಯಕರವಾಗಿ ಮೆಲುಕು ಹಾಕುತ್ತಾರೆ. ಅಂದಿನ ಕಾಲದಲ್ಲಿದ್ದ ಎತ್ತಿನಗಾಡಿಗಳನ್ನು ನಾವು ಈಗ ಹಳೆಯ ಕಪ್ಪು ಬಿಳುಪು ಹಿಂದಿ, ಕನ್ನಡ ಚಲನಚಿತ್ರಗಳಲ್ಲಿ ಮಾತ್ರ ಕಾಣಬಹುದಾಗಿದೆ.
ಹಳ್ಳಿಯ ಮನೆಯ ಅಟ್ಟಗಳನ್ನು ಏರುತ್ತಿದ್ದ ಮುಡಿಗಳ ಸ್ಥಾನದಲ್ಲಿ ಗೋಣಿ, ಪ್ಲಾಷ್ಟಿಕ್ ಚೀಲಗಳು ಬಂದು ಬಿಟ್ಟಿವೆ. ಅಂಗಳವನ್ನು ಅಲಂಕರಿಸುತ್ತಿದ್ದ `ತುಪ್ಪೆ' (ಕಣಜ) ಗಳು ನಾಪತ್ತೆಯಾಗಿವೆ. ಹಳ್ಳಿಗಳ ಹಳೆಯ ಮನೆಗಳ ಅಂಗಳದಲ್ಲಿ `ತುಪ್ಪೆದಕಳ'ವನ್ನು ಮಾತ್ರ ಈಗ ಕಾಣಬಹುದಾಗಿದೆ. ಭತ್ತ ಬೇಯಿಸುವ ದೊಡ್ಡದಾದ ಒಲೆ, ಹಂಡೆ ಕಾಣೆಯಾಗಿದೆ. ಭತ್ತ ಹರಡಲು ನೆಗಣಿಸಾರಿಸಿ ಅಂದಗೊಳಿಸಲಾದ ಅಂಗಳಗಳು ಕಾಣಿಸುತ್ತಿಲ್ಲ. ಅಕ್ಕಿ, ಎಣ್ಣೆ ಮಿಲ್ಗಳು ಬಂದ ನಂತರ ಭತ್ತ ಕುಟ್ಟಿ ಅಕ್ಕಿ ಮಾಡುವ, ಗಾಣದಮನೆಗಳನ್ನು ಈಗಿನ ತಲೆಮಾರು ಕಂಡೇ ಇಲ್ಲ. ಹಳ್ಳಿ ಹಳ್ಳಿಗಳಲ್ಲಿ ಇರುವ ಗಾಣದ ಕೊಟ್ಯ, ವಾಡರಿಬೆಟ್ಟು ಇತ್ಯಾದಿ ಹೆಸರುಗಳು ಯಾಕೆ ಬಂತು ಎಂದ ತಲೆ ಕೆರೆಯಬೇಕಾದ ಸಂದರ್ಭ ಬಂದಿದೆ. ಭತ್ತವನ್ನು ಅಕ್ಕಿಯಾಗಿಸುವ, ಕೊಬ್ಬರಿ ಎಣ್ಣೆಯಾಗುವ, ಕಬ್ಬು ಬೆಲ್ಲವಾಗುವ, ಮಣ್ಣು ಮಡಿಕೆಯಾಗುವ ಸಲಕರಣೆ, ವಿಧಾನಗಳನ್ನು ನಾವು ನೋಡಬೇಕಾದರೆ ಸಮ್ಮೇಳನಗಳಲ್ಲಿ ಏರ್ಪಡಿಸಲಾಗುವ ಪ್ರಾತ್ಯಕ್ಷಿಕೆಗಳ ಕಡೆ ದೃಷ್ಟಿ ಹಾಯಿಸಬೇಕಾಗುತ್ತದೆ. ಇದೆಲ್ಲಾ ತುಳುನಾಡಿನ ಪಳೆಯುಳಿಕೆಗಳು. ಕಾಲದ ಹೊಡೆತಕ್ಕೆ ನಲುಗಿ ಮರೆಯಾಗಿ ಹೋಗಿರುವ ಇಂತಹುಗಳ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದರಿಂದ ಸಮ್ಮೇಳನಗಳು ಸಾರ್ಥಕತೆಯನ್ನು ಪಡೆಯುತ್ತವೆ.
ಇದೆಲ್ಲಾ ಆಧುನಿಕತೆಯ ಹೊಡೆತದಿಂದ ಮರೆಯಾಗಿ ಹೋಯಿತು ಎಂದು ಹೇಳಬಹುದು. ಮನುಷ್ಯ ಆಧುನಿಕ ಆವಿಷ್ಕಾರಗಳಿಂದ ಪ್ರಯೋಜನವನ್ನು ಪಡೆಯುತ್ತಾ ಕಷ್ಟಪಡುವುದನ್ನು ಇಷ್ಟಪಡುವುದಿಲ್ಲ ಎಂದು ಸಮರ್ಥಿಸಬಹುದು. ಇಷ್ಟೆಲ್ಲಾ ಆಧುನಿಕ ಸೌಲಭ್ಯಗಳು, ಸಲಕರಣೆಗಳು ಇದ್ದರೂ ಭಾರತದ ಜೀವಾಳ, ಬೆನ್ನೆಲುಬಾದ ಬೇಸಾಯವೇ ಪ್ರಾತ್ಯಕ್ಷಿಕೆಯಾಗುವ ಕಡೆಗೆ ಸಾಗುತ್ತಿರುವುದನ್ನು ಯಾರಿಂದಲೂ ತಡೆಯಲಾಗುತ್ತಿಲ್ಲ. ತುಳು ಸಂಸ್ಕೃತಿ ಬೆಳೆದು ಬಂದದ್ದೇ ಕೃಷಿಯಿಂದ. ಬೃಹತ್ ಕೈಗಾರಿಕೆಗಳು ಆಗಮಿಸಿದ ನಂತರ ತುಳುನಾಡಿನ ಜನರು ಕೃಷಿಯ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ಕೃಷಿ ಮಾಡುತ್ತಿರುವ ಮನೆಯ ಯುವಕರು ಕೃಷಿ ಕೆಲಸಕ್ಕೆ ನಿಲ್ಲುತ್ತಿಲ್ಲ. ಪಟ್ಟಣದ, ಕೈಗಾರಿಕೆಗಳಲ್ಲಿನ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ತುಳುನಾಡಿನ ಕೃಷಿ ಕಾರ್ಯಗಳನ್ನು ಬಿಜಾಪುರ, ಬಳ್ಳಾರಿ, ಬಾಗಲಕೋಟೆ ಇತ್ಯಾದಿ ಕಡೆಗಳಿಂದ ಬಂದ ವಲಸೆ ಕಾಮರ್ಿಕರು ನಡೆಸುತ್ತಿದ್ದಾರೆ. ಮನೆಯ ಮಗ ನೂರೈವತ್ತು ರೂಪಾಯಿಗೆ ಕೈಗಾರಿಕೆಯ ಕಂಟ್ರಾಕ್ಟ್ ಕೆಲಸಕ್ಕೆ ಹೋಗುತ್ತಿದ್ದರೆ, ವಲಸೆ ಕೂಲಿ ಕಾರ್ಮಿಕರು ಇನ್ನೂರು ರೂಪಾಯಿಗೆ ಕೃಷಿ ಗದ್ದೆಯಲ್ಲಿ ಕೂಲಿ ಮಾಡುವ ಪರಿಸ್ಥಿತಿ ಒದಗಿ ಬಂದಿದೆ.
ಕೃಷಿಕೂಲಿಯ ಮೊತ್ತದ ಹೆಚ್ಚಳ, ಅನುಭವಿ ಕಾಮರ್ಿಕರ ಅಭಾವದಿಂದ ತುಳುನಾಡಿನ ಕೃಷಿ ಗದ್ದೆಗಳು ಪಾಳುಬಿದ್ದಿವೆ. ಇಲ್ಲಿನ ಭೂಮಿಯನ್ನು ಬಂಜರು ಭೂಮಿ ಎಂದು ಸಮಥರ್ಿಸಿ ಕೈಗಾರಿಕೆಗಳಿಗಾಗಿ ಅದನ್ನು ಪಡೆಯುವ ಹೊಂಚು ಹೂಡಿದ ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ನಿಧಾನವಾಗಿ ಇಂತಹಾ ಭೂಮಿಗಳಿಗೆ ಗಾಳ ಹಾಕಿ ಅಮೂಲ್ಯವಾದ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ತುಳುನಾಡು ಇನ್ನು ಕೆಲವೇ ದಶಕಗಳಲ್ಲಿ ಒಂದು ದೊಡ್ಡ ನಗರವಾಗಿ ಹೋಗುವ, ಕೈಗಾರಿಕೆಗಳು, ಕಾಂಕ್ರೀಟ್ ಕಟ್ಟಡಗಳಿಂದ ತುಂಬಿ ಹೋಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ಹಾಗಿರುವಾಗ ಇಲ್ಲಿನ ಜೀವಾಳವಾಗಿದ್ದ ಬೇಸಾಯದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸುವ ಸಂದರ್ಭ ಸಮ್ಮೇಳನಗಳನ್ನು ಏರ್ಪಡಿಸುವ ತುಳುವರಿಗೆ ಮುಂದೊಂದು ದಿನ ಒದಗಿ ಬರಬಹುದಲ್ಲವೇ?

No comments:

Post a Comment