Sunday, October 18, 2009

ದೇವರಿಲ್ಲ ರಕ್ಕಸರೇ ಎಲ್ಲಾ!

ದಶಕಗಳ ಹಿಂದೆ ತುಳುನಾಡಿನಲ್ಲಿ `ಮಾರ್ನೆಮಿ' ಸಮಯದಲ್ಲಿ ವೇಷಗಳನ್ನು ಧರಿಸಿಕೊಂಡು ಮನೆ ಮನೆಗೆ ತಿರುಗುವುದು ಸಾಮಾನ್ಯವಾಗಿತ್ತು. ಈಗಲೂ ಇಲ್ಲ ಎಂದಿಲ್ಲ. ಆದರೆ ಈ ವೇಷಧಾರಣೆಯಲ್ಲಾದ ಬದಲಾವಣೆಯಲ್ಲೇ ವಿಷಯ ಇರುವುದು. ಹುಲಿ, ಕರಡಿ, ಸಿಂಹ ಶಾರ್ದೂಲ, ಬೇಟೆಗಾರ ಇತ್ಯಾದಿ ವೇಷಗಳನ್ನು ಹೊರತುಪಡಿಸಿ ಹಿಂದೆ ರಾಮ,ಲಕ್ಷ್ಮಣ, ಸೀತೆ, ರಾಧಾಕೃಷ್ಣ, ಹನುಮಂತ, ನಾರದ, ಬ್ರಹ್ಮನ, ಈಶ್ವರ, ಕಾಳಿ ಇತ್ಯಾದಿ ವೇಷಗಳು ಮನೆ ಮನೆಗೆ ತಿರುಗಿ ದಸರಾದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದ್ದವು. ಆದರೆ ಸಂಜೆಯಾಗುತ್ತಿದ್ದಂತೆ ವೇಷಧಾರಿಗಳು ತಾವು ಧರಿಸಿದ ವೇಷಗಳ ಹಿರಿಮೆಯನ್ನು ಮರೆತು ಕಂಠಪೂರ್ತಿ ಶರಾಬು ಕುಡಿದು ದೇವರಿಗೆ ಅಪಚಾರವೆಸಗಿ ನಗೆಪಾಟಲಿಗೀಡಾಗುವುದು ನಡೆದಾಗ ಹಿಂದೂ ಸಂಘಟನೆಗಳು ಇಂತಹಾ ವೇಷ ಧರಿಸಬಾರದು ಎಂಬ ತಾಕೀತು ಮಾಡಿ ಕಾಯರ್ಯಾಚರಣೆಗಿಳಿದವು. ದೇವರ ವೇಷ ಹಾಕಿದ ವ್ಯಕ್ತಿಗಳನ್ನು ಅನಾಮತ್ತಾಗಿ ಎತ್ತಿಕೊಂಡುಹೋಗಿ ನೀರಿನಲ್ಲಿ ಸ್ನಾನಮಾಡಿಸಿ ಕಳುಹಿಸುವುದು. ದಸರಾ ಆರಂಭವಾಗುತ್ತಿದ್ದಂತೆ ದೇವರ ವೇಷವನ್ನು ಹಾಕಿಕೊಂಡು ಬೀದಿ ಸುತ್ತಬಾರದು ಎಂಬ ಎಚ್ಚರಿಕೆಯ ಪತ್ರಿಕಾ ಪ್ರಕಟಣೆ ನೀಡುವುದು ಆರಂಭವಾಯಿತು.
ಇದರ ಪರಿಣಾಮವಾಗಿ ದೇವರ ಮೊರೆ ಹೋಗಿದ್ದ ವೇಷಧಾರಿಗಳೆಲ್ಲ ರಕ್ಕಸರ ಮೊರೆ ಹೋಗುವುದಕ್ಕೆ ಆರಂಭಿಸಿದರು. ರಾವಣ, ಕುಂಭಕರ್ಣ, ಕಂಸ, ಹಿಡಿಂಬ, ತಾಟಕಿ, ಪೂತನಿ, ಮುಂತಾದ ರಾಕ್ಷಸ ಗಣಗಳು ಕೈಯಲ್ಲಿ ಬಿಚ್ಚುಗತ್ತಿ ಝಳಪಿಸುತ್ತಾ ಬೀದಿಗಿಳಿದು ಮನೆ ಮನೆಗೆ, ಅಂಗಡಿ ಮುಂಗಟ್ಟುಗಳಿಗೆ ಆರ್ಭಟ ಮಾಡುತ್ತಾ ಧಾಳಿ ಇಡತೊಡಗಿದವು. ಅತೀ ಸುಲಭವಾಗಿ ಹಾಕಬಹುದಾದ ಪ್ರೇತ ವೇಷಧಾರಿಗಳು ಎಲ್ಲೆಡೆ ಕಾಣಿಸಿಕೊಳ್ಳತೊಡಗಿದರು. ಇಂತಹಾ ವೇಷಗಳು ಶರಾಬು ಕುಡಿದು ಎಲ್ಲೆಡೆ ಬಿದ್ದರೂ ಯಾರ ಮನಸ್ಸಿಗೂ ನೋವುಂಟಾಗುವುದಿಲ್ಲ. ಈಗ ದಸರಾ ಸಂದರ್ಭದಲ್ಲಿ ರಕ್ಕಸರೇ ವಿಜೃಂಭಿಸಿ ದುಷ್ಟ ಸಂರಕ್ಷಣೆಗಾಗಿರುವ ದೇವರುಗಳು ಮಾಯವಾಗಿರುವುದು ಒಂದು ವಿಪರ್ಯಾಸ. ಕಲಿಯುಗದ ಮಹಿಮೆ!
ಭಿಕ್ಷುಕರು, ವಲಸೆ ಕಾರ್ಮಿಕರ ಮಕ್ಕಳು ಈ ಸಂದರ್ಭದಲ್ಲಿ ಭಿಕ್ಷೆಗಾಗಿ ವೇಷ ಧರಿಸಿ ಎಲ್ಲೆಡೆ ಓಡಾಡುತ್ತಿರುತ್ತಾರೆ. ಮುಖಕ್ಕೆ ಬಣ್ಣ ಬಳಿದರೆ ಸಾಕು ಅದೇ ಮಾರ್ನೆಮಿ ವೇಷ ಎಂದು ಭಾವಿಸುವಂತಾಗಿದೆ. ವೇಷಗಳಿಗೆ ಹಿಂದಿನ ಕಾಲದಲ್ಲಿದ್ದ ಮರ್ಯಾದೆ, ಗೌರವ ಕಡಿಮೆಯಾಗಿದೆ. ವೇಷ ಧರಿಸುವುದು ಭಿಕ್ಷೆ ಬೇಡುವುದಕ್ಕೆ. ಸಂಜೆ ಹೊತ್ತಿಗೆ ಕುಡಿದು ತೂರಾಡುವುದಕ್ಕೇ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.
ಹಿಂದೆ ವೇಷಗಳನ್ನು ಹರಕೆಗಾಗಿ ಹಾಕಲಾಗುತ್ತಿತ್ತು. ಮೂರು ದಿನಗಳ ಕಾಲ ವೇಷ ಧರಿಸಿ ದಸರಾದ ಕೊನೆಯ ದಿನ ದೇವಸ್ಥಾನಕ್ಕೆ ತೆರಳಿ ಓಕುಳಿಯಲ್ಲಿ ಭಾಗವಹಿಸಿ ವೇಷ ತೆಗೆಯುವುದು ಕ್ರಮವಾಗಿತ್ತು. ಈಗಲೂ ಕೆಲವರು ಅದೇ ನಿಯತ್ತಿನಿಂದ ನಡೆದುಕೊಳ್ಳುತ್ತಿದ್ದಾರೆ.
ವೇಷವನ್ನು ಅದೆಷ್ಟು ಗೌರವಯುತವಾಗಿ ಹಾಕಿಕೊಳ್ಳುತ್ತಿದ್ದರು ಎಂಬುದಕ್ಕೆ ನಮ್ಮೂರಿನಲ್ಲಿದ್ದ ಕೂಕ್ರ ಎಂಬ ಹೆಸರಿನವರೊಬ್ಬರು ಉದಾಹರಣೆಯಾಗಿದ್ದಾರೆ. ಆವಾಗಲೇ ಮಧ್ಯವಯಸ್ಸನ್ನು ದಾಟಿ ವೃದ್ದಾಪ್ಯದ ಕಡೆಗೆ ಅಡಿ ಇಡುತ್ತಿದ್ದ ಈ ವ್ಯಕ್ತಿ ನಾರದ, ಮುದುಕ, ನರ್ಸಣ್ಣ ಇತ್ಯಾದಿಯಾಗಿ ಒಂಟಿ ವೇಷಗಳನ್ನು ಹಾಕುತ್ತಿದ್ದರು. ಅದರಲ್ಲೊಂದು ಅಚ್ಚುಕಟ್ಟು, ನಿಷ್ಠೆ ಇತ್ತು. ಅವರು ಒಂದು ಮನೆಗೆ ಭೇಟಿ ನೀಡಿದರೆ ಅಲ್ಲಿದ್ದ ತೊಟ್ಟಿಲ ಮಗುವಿನಿಂದ ಹಿಡಿದು ಮನೆಯ ಹಣ್ಣು ಹಣ್ಣು ಮುದುಕರವರೆಗೂ ಮನರಂಜನೆ ನೀಡುತ್ತಿದ್ದರು. ಎಲ್ಲರಲ್ಲಿಯೂ ಅವರವರ ಪ್ರಾಯಕ್ಕೆ, ಆಸಕ್ತಿಗೆ ಭೂಷಣವಾದ ಪ್ರಾಜ್ಞನಂತೆ ಮಾತುಗಳನ್ನು ಹಾಡುಗಳನ್ನು ಆಡಿ, ಹೇಳಿ ಸಂತೋಷ ಗೊಳಿಸುತ್ತಿದ್ದರು. ಕೊನೆಗೂ ದುಡ್ಡು ಕೊಡಿ ಎಂಬ ಮಾತು ಅವರ ಬಾಯಿಯಿಂದ ಬರುತ್ತಿರಲಿಲ್ಲ. ಮುದುಕನಿಗೆ ಎಲೆ ಅಡಿಕೆ ತಿನ್ನುವ ಮನಸ್ಸಾಗಿದೆ. ಪೇಟೆಯ ಅಂಗಡಿಯ ಎಲೆಯಡಿಕೆ ಚೆನ್ನಾಗಿದೆ ಎಂಬಿತ್ಯಾದಿಯಾಗಿ ಸುತ್ತು ಬಳಸಿ ಮಾತನಾಡುತ್ತಾ ಕೊನೆಗೆ ಕೊಟ್ಟಷ್ಟು ಹಣ ತೆಗೆದುಕೊಂಡು ಹೊರಡುತ್ತಿದ್ದರು. ಇವರ ವೇಷ ಮನೆಗೆ ಬರದೇ ಇದ್ದರೆ ಆ ವರ್ಷದ ದಸರಾ ಸಾರ್ಥಕವಲ್ಲ ಎಂಬ ಭಾವನೆ ಮನೆಯವರಿಗೆ ಉಂಟು ಮಾಡುತ್ತಿದ್ದರು.
ಇಂತಹಾ ಕೂಕ್ರ ಒಂದು ಬಾರಿ ಲಾಟರಿಯಲ್ಲಿ ಹತ್ತು ಲಕ್ಷ ರೂಪಾಯಿಗಳ ಬಂಪರ್ ಬಹುಮಾನ ಬಂದು ದಿಢೀರ್ ಶ್ರೀಮಂತರಾಗಿಬಿಟ್ಟಿದ್ದರು. ಈ ಬಾರಿ ಕೂಕ್ರಣ್ಣನ ವೇಷ ಇಲ್ಲ. ಅವರಿಗೆ ವೇಷ ಹಾಕಿ ಏನಾಗಬೇಕಾಗಿದೆ ಬೇಕಾದಷ್ಟು ದುಡ್ಡು ಉಂಟು ಎಂದು ಜನ ಆಡಿಕೊಳ್ಳತೊಡಗಿದರು. ಆದರೆ ದಸರಾ ಮುಗಿಯಲು ಮೂರು ದಿನ ಬಾಕಿ ಇದೆ ಅನ್ನುತ್ತಿರುವಾಗಲೇ ಕೂಕ್ರ ವೇಷ ಧರಿಸಿ ಬೀದಿಗಿಳಿದೇ ಬಿಟ್ಟಿದ್ದರು. ಅದೇನು ಲಕ ಲಕ ಹೊಳೆಯುವ ಉಡುಪು. ಬೆಳ್ಳಗೆ ಬೆಳ್ಳಗೆ ಮಿರಿ ಮಿರಿ ಮಿಂಚುವ ಬಿಳಿ ತಲೆ ಕೂದಲು. ಸಾಂತಾಕ್ಲಾಸ್ ನ್ನು ಹೋಲುವ ಇಳಿ ಬಿದ್ದ ಗಡ್ಡ. ಕೈಯಲ್ಲಿ ಶ್ರೀಮಂತಿಕೆಯ ಸಂಕೇತವಾದ ಚಿನ್ನದ ಬಣ್ಣದ ಬೆತ್ತ. ಕಾಲಿಗೆ ನೀಟಾದ ಹೊಚ್ಚ ಹೊಸ ನಾಟಕದ ರಾಜ ಮಹಾರಾಜರು ಧರಿಸುವ ಪಾದರಕ್ಷೆ. ಲಕ್ಷಾಧೀಶ ಮುದುಕ ಮನೆ ಮನೆಗಳ ಅಂಗಡಿ ಮುಂಗಟ್ಟುಗಳ ಭೇಟಿ ಆರಂಭಿಸಿಯೇ ಬಿಟ್ಟಿದ್ದ. ಮನೆ ಮನೆಗಳಲ್ಲಿ ಈ ಹಿಂದಿನಂತೆಯೇ ವರ್ತನೆ. ನನಗೆ ದೇವರು ಯಾವುದಕ್ಕೂ ಕಡಿಮೆ ಮಾಡಿಲ್ಲ. ಎಲ್ಲವನ್ನೂ ಕೊಟ್ಟಿದ್ದಾನೆ, ನಾರಾಯಣ... ನಾರಾಯಣಾ... ಎನ್ನುತ್ತಾ ಮನೆ ಬಿಡುತ್ತಿದ್ದರು. ಇದೇ ರೀತಿ ಮೂರು ವರ್ಷಗಳವರೆಗೆ ಇವರು ಮಾರ್ನೆಮಿ ವೇಷ ಧರಿಸಿದ್ದರು.
ಹರಕೆ, ಸಂಪ್ರದಾಯದ ಉಳಿವು ಎಂದರೆ ಇದೇ ಅಲ್ಲವೇ?

No comments:

Post a Comment