Sunday, October 18, 2009

ಕೆಪಿಎಲ್ ಅಂಗಣದಲ್ಲಿ ಚೀರ್`ಪಿಲೀ'ಸ್ ಉಡುಪಿ ವಿಟ್ಲಪಿಂಡಿಯಲ್ಲಿ `ಪೊಣ್ಣುಪಿಲಿ'

ಹುಲಿವೇಷ ಧಾರಣೆ ಜಗತ್ತಿನಾದ್ಯಂತ ಕಂಡು ಬರುತ್ತದೆ. ಪ್ರಾದೇಶಿಕವಾಗಿ ಹುಲಿ ವೇಷ ಧರಿಸುವುದರಲ್ಲಿ ಬದಲಾವಣೆಗಳು ಇರುತ್ತವೆ. ಹೆಚ್ಚಿನ ಕಡೆಗಳಲ್ಲಿ ಹುಲಿಗಳ ಬಣ್ಣದ ಬಟ್ಟೆಯನ್ನು ಧರಿಸಿ ಕುಣಿಯುವುದನ್ನು ನಾವು ಕಾಣುತ್ತೇವೆ. ಆದರೆ ತುಳುನಾಡಿನ ಪಿಲಿ ಅಂದರೆ ಹುಲಿ ಜಗತ್ತಿನ ಇತರ ಕಡೆಗಳಿಗಿಂತ ಭಿನ್ನವಾಗಿದೆ.
ತುಳುನಾಡಿನ ಹುಲಿ ಸಾಹಸದ ಸಂಕೇತವೂ ಹೌದು. ಇಲ್ಲಿ ಹುಲಿಯ ಪಟ್ಟೆಯಂತೆ ಬಟ್ಟೆಯನ್ನು ಧರಿಸುವುದಿಲ್ಲ. ಮೈತುಂಬಾ ಪಟ್ಟೆಗಳನ್ನು ಬಣ್ಣದಿಂದ ಬಳಿದುಕೊಳ್ಳಲಾಗುತ್ತದೆ. ಬಣ್ಣದ ವಾಸನೆ ಮತ್ತು ಕುಣಿತ ಎಲ್ಲರಿಗೂ ಒಗ್ಗವುದಿಲ್ಲ. ದಸರಾದ ದಿನಗಳಲ್ಲಿ ಮೂರು, ಆರು, ಒಂಭತ್ತು ದಿನಗಳ ಕಾಲ ಬಟ್ಟೆ ಧರಿಸಿದೆ ಕೇವಲ ಬಣ್ಣದೊಂದಿಗೆ ಕಳೆಯಬೇಕಾಗುತ್ತದೆ. ಮಳೆ, ಚಳಿ, ಬಿಸಿಲು ಯಾವುದಕ್ಕೂ ಕಂಗೆಡದೆ ಕುಣಿಯಬೇಕಾಗುತ್ತದೆ. ಜತೆಗೆ ಕುರಿ, ಅಕ್ಕಿ ಮುಡಿ ಎತ್ತುವುದು. ವಿವಿಧ ಕೋನಗಳಲ್ಲಿ ಹಣ ಎತ್ತುವಂತಹಾ ದೈಹಿಕ ಕಸರತ್ತುಗಳನ್ನು ಮಾಡಬೇಕಾಗುತ್ತದೆ.
ದಸರಾ ದಿನಗಳಲ್ಲಿ ಹುಲಿ ವೇಷವನ್ನು ಹಾಕುವವರನ್ನು ಸಾಹಸಿಗಳೆಂದೇ ಪರಿಗಣಿಸಲಾಗುತ್ತದೆ. ಈ ಹುಲಿಗಳ ನಾಯಕನಿಗೆ ಅಥವಾ ಹುಲಿ ವೇಷ ಹಾಕಿಸುವವನ ಹಿಂದೆ ಬಣ್ಣ ಬಣ್ಣದ ಸಾಹಸ ಕತೆಗಳು ಗರಿ ಬಿಚ್ಚತೊಡಗುತ್ತವೆ. ಗಢಚಿಕ್ಕುವ ಎರಡು ಮೂರು ತಾಸೆಯ, ಆಧುನಿಕ ಸಿನಿಮಾ ಹಾಡುಗಳ ಬ್ಯಾಂಡ್ ಸೆಟ್ನೊಂದಿಗೆ ಏಳು, ಹದಿನಾಲ್ಕು, ಇಪ್ಪತ್ತೊಂದು ಹುಲಿಗಳ ತಂಡ ಹೊರಟಿತು ಎಂದರೆ ಊರಿಡೀ ಗದ್ದಲವೇ ಗದ್ದಲ. ಕೆಲವು ಊರಿನ ಸಾಹಸಿಗರು ನೂರು ಹುಲಿಗಳ ತಂಡವನ್ನೂ ದಸರಾ ಸಮಯದಲ್ಲಿ ರಸ್ತೆಗಿಳಿಸುವುದೂ ಇದೆ. ಹುಲಿಗಳ ಉಪಟಳಕ್ಕೆ ಹೆದರಿ ಕೆಲವರು ಜೇಬು ಗಟ್ಟಿಯಾಗಿ ಹಿಡಿದುಕೊಂಡು ಊರು ಬಿಡುವುದೂ ಇದೆ.
ದಸರಾ ಹಬ್ಬವನ್ನು ತುಳುನಾಡಿನಲ್ಲಿ `ಮಾರ್ನೆಮಿ' ಎಂದು ಆಚರಿಸಲಾಗುತ್ತದೆ. ವಿಧ ವಿಧವಾದ ವೇಷಗಳ ಮುಂಚೂಣಿಯಲ್ಲಿ ದುರ್ಗಾದೇವಿಯ ವಾಹನವಾದ ಹುಲಿವೇಷಧಾರಿಗಳು ತುಳುನಾಡಿನಾದ್ಯಂತ ಕಂಡುಬರುತ್ತಾರೆ. `ಮಾರ್ನೆಮಿದ ಪಿಲಿ' ಎಂದು ಇವುಗಳನ್ನು ಕರೆಯಲಾಗುತ್ತದೆ. ತುಳುನಾಡಿನ ವ್ಯಾಪ್ತಿಯನ್ನು ಬಿಟ್ಟು ಈ ಪಿಲಿಗಳು ಹೊರ ಪ್ರದೇಶಗಳಲ್ಲಿ ಅಷ್ಟಾಗಿ ಪ್ರಾಮುಖ್ಯತೆಯನ್ನು ಪಡೆದಿಲ್ಲ. ಈ ಹುಲಿ ಕುಣಿತಕ್ಕೂ ಒಂದು ಲಯ, ಪಟ್ಟು ಇದೆ.
ತುಳುನಾಡಿನಲ್ಲಿ ದಸರಾವನ್ನು ಹೊರತುಪಡಿಸಿ ಚೌತಿಯ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಠಮಿಯ ಮೊಸರು ಕುಡಿಕೆ ಮತ್ತು ಇತರ ಕೆಲವು ಮೆರವಣಿಗೆಳಿಗೆ ಕಳೆಕಟ್ಟ ಬೇಕಾದರೆ ಹುಲಿ ಕುಣಿತ ಬೇಕೇ ಬೇಕು.
ತುಳುನಾಡಿನ ಪಿಲಿ ಈಗ ನಾಡಿನ ಗಡಿ ದಾಟಿ ಹೋಗಿದೆ. ಜಗತ್ತಿನ ಶ್ರೀಮಂತ ಆಟಗಳಲ್ಲಿ ಒಂದಾದ ಕ್ರಿಕೆಟ್ ಅಂಗಣಕ್ಕೆ ತುಳುನಾಡಿನ ಪಿಲಿ ಕಾಲಿಟ್ಟಿದೆ. ವಿಶ್ವಕಪ್, ಟ್ಟೆಂಟಿ ಟ್ಟೆಂಟಿ ವಿಶ್ವಕಪ್ ಪಂದ್ಯಾಟಗಳಲ್ಲಿ ಚೀರ್ ಗರ್ಲ್ಗಳು ಕಡಿಮೆ ಬಟ್ಟೆ ಧರಿಸಿಕೊಂಡು ಕೆಲವರು ಹೇಳುವಂತೆ ಅಶ್ಲೀಲವಾಗಿ ಕುಣಿಯುವುದನ್ನು ನಾವು ಕಂಡಿದ್ದೇವೆ. ಕನರ್ನಾಟಕದೊಳಗಿನ ಕೆಪಿಎಲ್ ಟ್ವೆಂಟಿ ಟ್ವೆಂಟಿ ಪಂದ್ಯಾಟದಲ್ಲಿ ಬಟ್ಟೆ ಕಡಿಮೆ ಇದ್ದರೂ ಅಶ್ಲೀಲವೆನಿಸದ `ಚೀಯರಪಿಲೀಸ್' ಕುಣಿದಿವೆ. ತುಳುನಾಡಿನ ಪಿಲಿಯನ್ನು ಬೆಂಗಳೂರಿನ ಕ್ರೀಡಾಂಗಣಕ್ಕೆ ಕರೆದೊಯ್ದ ಯುನೈಟೆಡ್ ಮಂಗಳೂರು ತಂಡದ ಪ್ರಾಯೋಜಕರು ನಿಜಕ್ಕೂ ಅಭಿನಂದನಾರ್ಹರು.
ಅಂದಹಾಗೆ ಹುಲಿ ಕುಣಿತ ಇತಿಹಾಸದಲ್ಲಿ ಇನ್ನೂ ಒಂದು ದಾಖಲೆಯಾಗಿದೆ. ಉಡುಪಿಯ ಸುಪ್ರಸಿದ್ಧ ವಿಟ್ಲ ಪಿಂಡಿ ಕಾರ್ಯಕ್ರಮದಲ್ಲಿ ಮಹಿಳಾ ಪಿಲಿಗಳು ಈ ಬಾರಿ ಕುಣಿದಿವೆ.

No comments:

Post a Comment