Sunday, October 18, 2009

ಅಂಗೈಯಲ್ಲಿ ನೆಲ್ಲಿಕಾಯಿ ಇರುವಾಗ...

`ಮಡು ಪುಗೆಲ್ಡ್ ದೀವೊಂದು ಮಡು ಬೋಡುಂದು ಊರಿಡೀ ನಾಡ್ದೆಗೆ' (ಹೆಗಲಲ್ಲಿ ಕೊಡಲಿ ಇಟ್ಟುಕೊಂಡು ಕೊಡಲಿಗಾಗಿ ಊರೆಲ್ಲಾ ಹುಡುಕಾಡಿದನಂತೆ) ಎಂಬ ಆಡು ಮಾತು ತುಳುನಾಡಿನ ಹಳ್ಳಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಂಗೈಯಲ್ಲಿ ನೆಲ್ಲಿಕಾಯಿ ಇರುವಾಗ ಉಪ್ಪಿನಕಾಯಿಗಾಗಿ ತವಕಿಸಿದಂತೆ ಎಂಬ ಕನ್ನಡದ ಮಾತೂ ಇದಕ್ಕೆ ತಾಳೆಯಾಗುತ್ತದೆ.
ತುಳುನಾಡಿನ ಇತಿಹಾಸದ ಬಗ್ಗೆ ಸಮಗ್ರವಾಗಿ ವಾದ, ಪುರಾವೆಯನ್ನು ಮಂಡಿಸಲು ಸಾಧ್ಯವಿಲ್ಲ ಎಂಬ ಮಾತು ಇತ್ತೀಚೆಗೆ ಕೇಳಿಬಂದಿದೆ. ಇದು ಇಲ್ಲಿನ ಇತಿಹಾಸದ ಲೋಪವಲ್ಲ. ಅದನ್ನು ಸಮಗ್ರವಾಗಿ ಅಧ್ಯಯನ ಮಾಡುವಲ್ಲಿ ನಾವು ಸೋತು ಹೋಗಿದ್ದೇವೆ. ಆದರೆ ಈ ಬಾರಿ ಈ ಪ್ರಯತ್ನದಲ್ಲಿ ಹಳೆ ಸೋಲುಗಳನ್ನು ಮೆಟ್ಟಿ ನಿಂತು ಗೆಲುವಿನ ನಗೆ ಬೀರಿ ತುಳುವಿಗೊಂದು ಸ್ಥಾನಮಾನ ಕೊಡುವ ಪ್ರಯತ್ನ ಸಾರ್ಥಕವಾಗುತ್ತದೆ ಎಂಬ ಭರವಸೆ ಮೂಡುತ್ತಿದೆ. ತುಳುಭಾಷೆಗೊಂದು ಗೆಲುವನ್ನು ಕೊಡಲು ಈ ನಾಡಿನ ದಿಗ್ಗಜರು ಟೊಂಕ ಕಟ್ಟಿ ನಿಂತಿದ್ದಾರೆ.
ತುಳುನಾಡಿನ ವೀರ ಪುರುಷರಾದ ಕೋಟಿಚೆನ್ನಯ, ಕಾಂತಾಬಾರೆ ಬೂದಾಬಾರೆ, ಅಗೋಳಿ ಮಂಜಣ್ಣ, ದೇವುಪೂಂಜ, ಸಿರಿ ಮುಂತಾದವರ ಜೀವನ ಚರಿತ್ರೆಯನ್ನು ಸಾರುವ ಪಾಡ್ದನಗಳು, ಅವರು ಬಾಳಿ ಬೆಳಗಿ ಕಾರಣೀಕ ಮೆರೆದ ಕುರುಹುಗಳು ಆಧುನಿಕ ಯುಗದಲ್ಲಿ ಮೂಢನಂಬಿಕೆಗಳ ಸಾಲಿಗೆ ಸೇರಿಸಲ್ಪಡುತ್ತಿರುವುದು ವಿಷಾದನೀಯ. ಇವುಗಳ ಬಗ್ಗೆ ಬರಹರೂಪದ ದಾಖಲೆಗಳು ಇಲ್ಲ. ಕಂಠಸ್ಥವಾಗಿ ಹರಿದು ಬಂದ ಪಾಡ್ದನಗಳಿಗೆ ಅದೆಷ್ಟು ಸತ್ಯವಾಗಿದ್ದರೂ ಮಾನ್ಯತೆ ಸಿಗಲಾರದು ಎಂಬುದನ್ನು ಒಂದೊಮ್ಮೆ ಒಪ್ಪಬಹುದಾದರೂ. ಬರಹ ರೂಪದಲ್ಲಿ, ವಿದೇಶಿ ಪ್ರವಾಸಿಗರ ಪ್ರವಾಸ ಕಥನ ದಾಖಲೆಗಳನ್ನು ಮೂಲವಾಗಿಟ್ಟುಕೊಂಡು ಸಂಶೋಧನೆ ನಡೆಸಿ ತುಳುವಿಗೆ ನ್ಯಾಯ ಒದಗಿಸಲು ಸಾಧ್ಯವಿದೆ.
ತುಳು ವಂಶದ ಪ್ರಖ್ಯಾತ ವ್ಯಕ್ತಿಗಳಲ್ಲಿ ವಿಜಯನಗರ ಸಾಮ್ರಾಜ್ಯದ ಅರಸನಾದ ಶ್ರೀಕೃಷ್ಣದೇವರಾಯ ಅಗ್ರಮಾನ್ಯನಾಗಿದ್ದಾನೆ. ಈತನಿಗೆ ತುಳು ಭಾಷೆ ಬರುತ್ತಿತ್ತು ಎಂಬ ಕಾರಣಕ್ಕಾಗಿಯೇ ಈ ವಾದವನ್ನು ಮಾಡುವಂತಿಲ್ಲ. ಅಂದಿನ ದಕ್ಷಿಣ ಭಾರತದ ರಾಜಕೀಯದ ವ್ಯವಸ್ಥೆಯಲ್ಲಿ ಓರ್ವ ಸಮರ್ಥರಾಜನೆನಿಸಿ ಕೊಂಡವನಿಗೆ ಪಂಚದ್ರಾವಿಡ ಭಾಷೆಗಳಾದ ತುಳು, ಕನ್ನಡ, ತಮಿಳು, ತೆಲುಗು, ಮಲಯಾಲಂಗಳ ಜ್ಞಾನವಿರುವುದು ಅಗತ್ಯವಾಗಿದ್ದಿರಬಹುದು. ಶ್ರೀಕೃಷ್ಣದೇವರಾಯ ತುಳುವ ವಂಶಸ್ಥ ಎಂಬ ವಿಚಾರವು ಇಲ್ಲಿ ಪ್ರಾಮಖ್ಯತೆಯನ್ನು ಪಡೆಯುತ್ತದೆ. ಈ ವಿಚಾರ ಕಂಠಸ್ಥವಾಗಿ ಬಂದದ್ದಲ್ಲ. ಸುಮಾರು ನಾಲ್ಕು ದಶಕಗಳ ಹಿಂದೆ ವಿಜಯನಗರ ಸಾಮ್ರಾಜ್ಯಕ್ಕೆ ಆಗಮಿಸಿದ ವಿದೇಶಿ ಪ್ರವಾಸಿಗರ ಪ್ರವಾಸ ಕಥನದಲ್ಲಿ ಈ ವಿಚಾರಗಳು ತಿಳಿದುಬರುತ್ತದೆ. 1441ರಲ್ಲಿ ವಿಜಯನಗರಕ್ಕೆ ಪ್ರವಾಸಿಯಾಗಿ ಬಂದ ಅಬ್ದುಲ್ ರಜಾಕ್, ಇತಿಹಾಸಕಾರ ಬಾರ್ಬೋಸ್ ಕೃಷ್ಣದೇವರಾಯನ ಔದಾರ್ಯ ಮತ್ತು ವಿಜಯನಗರದ ವೈಭವವನ್ನು ಕೊಂಡಾಡಿದ್ದಾರೆ ಪೋರ್ಚಗಲ್ ಪ್ರವಾಸಿ ಡೊಮಿಂಗೊ ಪಾಯೇಸ್ ಕೃಷ್ಣದೇವರಾಯನನ್ನು `ಫರ್ಫೆಕ್ಟ್ ಕಿಂಗ್' ಎಂದೇ ಕರೆದಿದ್ದಾನೆ. ಜತೆಗೆ ಇತಿಹಾಸಕಾರರು ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ತುಳುವ ವಂಶಸ್ಥನೆಂಬ ವಿವರವನ್ನೂ ನೀಡಿದ್ದಾರೆ.
ತುಳುವಿಗೊಂದು ಮಾನ್ಯತೆ ಒದಗಿಸಿಕೊಡುವ ನಿಟ್ಟಿನಲ್ಲಿ ಟೊಂಕಕಟ್ಟಿ ನಿಂತಿರುವವರಿಗೆ ಈಗ ಇರುವ ಕೆಲಸವೇನೆಂದರೆ ಶ್ರೀಕೃಷ್ಣದೇವರಾಯನ ಮೂಲವನ್ನು ಹುಡುಕಿ ತೆಗೆಯುವುದು. ಈತನ ಮೂಲವನ್ನು ಹುಡುಕುತ್ತಾ ಹೋದರೆ ಖಂಡಿತವಾಗಿಯೂ ತುಳುನಾಡಿನ ಯಾವುದಾದರೊಂದು ಪ್ರದೇಶಕ್ಕೆ ಆ ಗೌರವ ಸಲ್ಲಬಹುದು.
ಈ ಬಾರಿ ವಿಶ್ವತುಳು ಸಮ್ಮೇಳನ ಉಜಿರೆಯಲ್ಲಿ ನಡೆಯುತ್ತಿದೆ. ಸಮಗ್ರ ತುಳುವರಿಗೆ ಗುರಿಕಾರರ ಸ್ಥಾನದಲ್ಲಿರುವ ವೀರೇಂದ್ರ ಹೆಗ್ಗಡೆಯವರು ಇದರ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಖಂಡಿತವಾಗಿಯೂ ಈ ಬಾರಿಯ ಸಮ್ಮೇಳನ ಅರ್ಥಪೂರ್ಣವಾಗುವ ಭರವಸೆ ಇದೆ. ಇಂತಹಾ ಸಂದರ್ಭದಲ್ಲಿ ತುಳುವಂಶಸ್ಥ ಶ್ರೀಕೃಷ್ಣದೇವರಾಯನ ಬಗ್ಗೆ ಆಳವಾದ ಸಂಶೋಧನೆ ನಡೆದಲ್ಲಿ ಅದು ತುಳುಭಾಷೆಗೆ ಸ್ಥಾನ ಮಾನ ಕಲ್ಪಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಬಹುದು.

No comments:

Post a Comment