Sunday, October 18, 2009

ಗೂಡುದೀಪ ಶ್ರದ್ಧೆ ಮತ್ತು ಆಧುನಿಕತೆ


ದೀಪಾವಳಿ ಬಂದ ಕೂಡಲೇ ಗೂಡುದೀಪಗಳು ಎಲ್ಲೆಡೆ ಕಂಡು ಬರುತ್ತವೆ. ಇನ್ನೂ ಹದಿನೈದು ದಿವಸ ಬಾಕಿ ಇರುವಾಗಲೇ ಅಂಗಡಿಯ ಬಾಗಿಲಲ್ಲಿ ತರತರದ ಗೂಡು ದೀಪಗಳು ನೇತಾಡತೊಡಗುತ್ತವೆ. ಜಪಾನ್, ಚೈನಾ ಮಾದರಿಯ ಗೋಪುರಗಳ ಮೇಲೆ ಗೋಪುರಗಳನ್ನು ಇಟ್ಟಂತೆ. ಭೂಗೋಳ ಮುಂತಾದ ರೀತಿಯ ವಿವಿಧ ಮಾದರಿಯ ರೆಡಿಮೇಡ್ ಗೂಡುದೀಪಗಳ ಒಳಗೆ ಸಂಜೆ ಹೊತ್ತಿಗೆ ಬೆಳಕನ್ನು ನೋಡುವುದೇ ಚೆಂದ.
ಪೇಟೆಯ ಬೀದಿಯಲ್ಲಿ ಸುತ್ತಾಡುತ್ತಾ ಹೋದಾಗ ಇಂತಹಾ ಒಂದು ಗೂಡು ದೀಪವನ್ನು ಕೊಂಡೊಯ್ದು ಮನೆಯ ಮುಂದೆ ನೇತಾಡಿಸಿ ಅದರ ಒಳಗೆ ದೀಪ ಹಾಕಿ ಸಂಭ್ರಮಿಸಬೇಕು ಎಂದು ಅನಿಸುತ್ತದೆ. ಈ ಅನಿಸಿಕೆಯನ್ನು ಕಾರ್ಯರೂಪಕ್ಕೆ ತರುವುದು ಏನೂ ಕಷ್ಟವಿಲ್ಲ. ಹತ್ತಿಪ್ಪತ್ತು ರೂಪಾಯಿ ಕೊಟ್ಟರೆ ಒಂದು ಗೂಡು ದೀಪ ನಿಮ್ಮದಾಗುತ್ತದೆ.
ಒಂದೆರಡು ದಶಕಗಳ ಹಿಂದೆ ಇಂತಹಾ ಗೂಡುದೀಪಗಳ ರೆಡಿಮೇಡ್ ಗೂಡು ದೀಪಗಳು ಅಂಗಡಿಗಳ ಮುಂದೆ ನೇತಾಡುತ್ತಿರಲಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಮನೆ ಮುಂದೆ ಒಂದು ಗೂಡುದೀಪವನ್ನು ನೇತಾಡಿಸಬೇಕು ಎಂದು ಅನಿಸಿದರೆ ಅದಕ್ಕಾಗಿ ಒಂದೆರೆಡು ವಾರಗಳ ತಯಾರಿ ಅತ್ಯಗತ್ಯವಾಗಿತ್ತು. ಮೊದಲಿಗೆ ಬಿದಿರು ಕಡ್ಡಿಗಳ ಹುಡುಕಾಟ. ಕಾಡು ಗುಡ್ಡ ಸುತ್ತಿಯೋ, ಮನೆಯ ಹಟ್ಟಿಗೆ ಉಪಯೋಗಿಸಲಾದ ಬಿದಿರನ್ನು ಕದಲಿಸಿಯೋ ಬಿದಿರಿನ ಕಡ್ಡಿಗಳನ್ನು ತಯಾರಿಸಬೇಕಾಗಿತ್ತು. ನಾಲ್ಕು ಭುಜಗಳ ಒಂದೂವರೆ ಅಡಿ ಉದ್ದದ ಗೂಡುದೀಪವನ್ನು ತಯಾರಿಸಬೇಕಾದರೆ 32 ಒಂದಡಿ ಉದ್ದದ ಮತ್ತು ನಾಲ್ಕು ಒಂದೂವರೆ ಅಡಿ ಉದ್ದದ ಕಡ್ಡಿಗಳನ್ನು ಕಷ್ಟಪಟ್ಟು ತಯಾರಿಸಬೇಕಾಗಿತ್ತು. ಬಿದಿರಿನ ಕಡ್ಡಿಗಳ ಮೂಲೆಯನ್ನು ಹಗ್ಗದ ಸಹಾಯದಿಂದ ಕಟ್ಟಿ ಎಂಟು ಚಚ್ಚೌಕಗಳನ್ನು ತಯಾರಿಸಿ ಅದರಲ್ಲಿ ನಾಲ್ಕು ಚೌಕಗಳ ಮಧ್ಯಭಾಗಕ್ಕೆ ಒಂದೂವರೆ ಅಡಿ ಉದ್ದದ ಕಡ್ಡಿಗಳನ್ನು ಮೇಲೆ ಮತ್ತು ಕೆಳಗೆ ಸಮಾನವಾಗಿ ಮೀರಿಸಿ ಕಟ್ಟಿದ ನಂತರ ಎರಡೆರಡು ಚಚ್ಚೌಕಗಳನ್ನು ಮೇಲೆ ಮತ್ತು ಕೆಳಗೆ ಬಿಗಿದು ಕಟ್ಟಿದರೆ ಗೂಡುದೀಪದ ಅಟ್ಟೆ ರೆಡಿ. ಈ ಕಟ್ಟುವಿಕೆಯಲ್ಲಿ ತುಂಬಾ ಶ್ರದ್ಧೆ ಇಡಬೇಕಾದ ಅವಶ್ಯಕತೆ ಇತ್ತು. ಸ್ವಲ್ಪ ಸಡಿಲವಾದರೂ ಗೂಡುದೀಪ ಮೋಟು ಮೋಟಾಗುತ್ತಿತ್ತು.
ಬೆವರಿಳಿಸಿ ಅಟ್ಟೆ ತಯಾರಿಸಿದ ಮೇಲೆ ಬಣ್ಣದ ಕಾಗದದ ಅಂಗಡಿಗೆ ಓಟ. ಅಲ್ಲಿಂದ ಬಣ್ಣದ ಕಾಗದ ಬೇಗಡೆ ಗೂಡುದೀಪದ ಬಾಲಕ್ಕೆ ಬೇಕಾದ ಕಾಗದಗಳನ್ನು ತಂದು ಮೈದಾ ಹಿಟ್ಟಿನ ಗೋಂದು ತಯಾರಿಸಿ ಅಟ್ಟೆಗೆ ಬಣ್ಣಬಣ್ಣದ ಕಾಗದದ ಬಟ್ಟೆಯನ್ನು ತೊಡಿಸಲು ಕುಳಿತುಕೊಳ್ಳಬೇಕು. ಬಣ್ಣದ ಹೊಂದಾಣಿಕೆ, ಅಂಚಿಗೆ ಬೆಗಡೆ, ಮಾರುದ್ದದ ಬಾಲಗಳನ್ನು ಎಚ್ಚರಿಕೆಯಿಂದ ಅಂಟಿಸಬೇಕು. ಸ್ವಲ್ಪ ಮೈಮರೆತರೆ ಬೆರಳು, ಮೊಣಕೈ ತಾಗಿ ಅಂಟಿಸಿದ ಬಣ್ಣದ ಕಾಗದ ತೂತಾಗುವ ಸಾಧ್ಯತೆ ಇದೆ. ಅಂತಿಮವಾಗಿ ಮೂಲೆ ಮೂಲೆಗಳಿಗೆ ಬಣ್ಣ ಬಣ್ಣದ ವೃತ್ತಾಕಾರದ ಅಥವಾ ಚೌಕಾಕಾರದ ಗೊಂಡೆಗಳನ್ನು ಮಾಡಿ ಅಂಟಿಸಿ ಒಂದೆರಡು ಗಂಟೆ ಬಿಸಿಲಿನಲ್ಲಿ ಒಣಗಲಿಕ್ಕೆ ಇಟ್ಟರೆ ಗೂಡು ದೀಪ ರೆಡಿ.
ಇಷ್ಟು ಕಷ್ಟಪಟ್ಟು ತಯಾರಿಸಿದ ಗೂಡುದೀಪವನ್ನು ಮನೆಯ ಮುಂದಿನ ಪಕ್ಕಾಸಿಗೆ ನೇತು ಹಾಕಿದರೆ ಸರಿಯಾಗುತ್ತದೆಯೇ? ಪಕ್ಕದ ಮನೆಯವ ಏರಿಸಿದ ಎತ್ತರವನ್ನು ಮೀರಬೇಕು. ಅದನ್ನು ಎತ್ತರೆತ್ತರಕ್ಕೆ ಏರಿಸಲಿಕ್ಕಾಗಿ ಮನೆಯ ಮುಂದಿನ ಎತ್ತರ ಮರಕ್ಕೆ ಉದ್ದನೆಯ ಬಿದಿರಿನ ಕೋಲು ಕಟ್ಟಿ ಅದರ ತುದಿಯಲ್ಲಿ ತ್ರಿಕೋಣಾಕಾರದ ಬಿದಿರಿನ ಕೋಲು ಕಟ್ಟಿ ಅಡ್ಡಲಾಗಿ ಕಟ್ಟಿದ ಕೊಡೆಯ ಕಡ್ಡಿಯ ನಡುವೆ ರೀಲು ಸಿಕ್ಕಿಸಿ ನೆಲದುದ್ದಕ್ಕೂ ಹಗ್ಗ ಕಟ್ಟಬೇಕು. ಇಷ್ಟೆಲ್ಲಾ ಆದರೆ ಗೂಡು ದೀಪದ ಪೂರ್ವ ತಯಾರಿ ಮುಗಿಯುತ್ತದೆ.
ದೀಪಾವಳಿಯ ದಿನ ವಿದ್ಯುತ್ ಇಲ್ಲದೆ ಮನೆಯಲ್ಲಾದರೆ ಗೂಡು ದೀಪದ ಒಳಗೆ ಕ್ಯಾಂಡಲ್ ಇರಿಸಿ ಏರಿಸಬೇಕು. ವಿದ್ಯುತ್ತು ಇರುವ ಮನೆಯಾದರೆ ಒಳಗೆ ಬಲ್ಬು ಸಿಕ್ಕಿಸಿ ವಯರ್ ಸಮೇತ ಏರಿಸಬೇಕು. ಹೀಗೆ ಏರಿಸಿದ ಗೂಡುದೀಪವನ್ನು ದೂರದ ಎತ್ತರದ ಪ್ರದೇಶದಲ್ಲಿ ನಿಂತು ನೋಡಿ ಹಿರಿಹಿರಿ ಹಿಗ್ಗಿದರೇನೇ ದೀಪಾವಳಿ ಸಾರ್ಥಕವಾದಂತೆ.
ಕಲಾತ್ಮಕವಾದ ಗೂಡುದೀಪಗಳೂ ರಚಿತವಾಗುತ್ತಿದ್ದವು. ನಕ್ಷತ್ರ, ಬಿಸಿಗಾಳಿಯ ಒತ್ತಡಕ್ಕೆ ತಿರುಗುವ ಗೂಡುದೀಪಗಳನ್ನು ರಚಿಸುವ ಮರಿ ಇಂಜಿನಿಯರುಗಳು ಇದ್ದರು.
ವೇಗವಾಗಿ ಸಾಗುವ ಯಾಂತ್ರಿಕತೆ, ಆಧುನಿಕತೆಯಲ್ಲಿ ಈಗ ಪುರಸೊತ್ತು ಯಾರಿಗಿದೆ? ಮನೆಯಲ್ಲಿ, ಗ್ರೈಂಡರ್, ಮಿಕ್ಸಿ, ನೀರೆತ್ತಲು ಪಂಪು ಬಂದಿದ್ದರೂ, ಟಿ.ವಿ. ಕಂಪ್ಯೂಟರ್ಗಳನ್ನು ಉಪಯೋಗಿಸಲು ದಿನದ 24 ಗಂಟೆಗಳೂ ಸಾಲದಾಗಿದೆ. ಹಾಗಿರುವಾಗ ಕಷ್ಟಪಟ್ಟು ಗೂಡು ದೀಪ ನಿಮರ್ಮಿಸುವ ಶ್ರದ್ಧೆ ಯಾರಿಗಿದೆ? ದೀಪಾವಳಿ ದಿನ ಪೇಟೆಗೊಂದು ಸುತ್ತು ಹೊಡೆದು ಅಲ್ಲಿ ಸಿಗುವ ರೆಡಿಮೇಡ್ ಗೂಡುದೀಪಗಳನ್ನು ತಂದು ಮನೆಯ ಮುಂದೆ ನೇತಾಡಿಸಿದರೆ ಮುಗಿಯಿತು.
ಇದರ ನಡುವೆಯೂ ಮಂಗಳೂರಿನಲ್ಲಿ ಕೆಲವು ಸಂಸ್ಥೆಗಳು ಗೂಡು ದೀಪ ಸ್ಪರ್ಧೆಗಳನ್ನು ಏರ್ಪಡಿಸಿ ಕಷ್ಟಪಟ್ಟು ಗೂಡು ದೀಪ ನಿಮರ್ಮಿಸುವಲ್ಲಿನ ಶ್ರದ್ಧೆಯನ್ನು ಜೀವಂತವಾಗಿಸುತ್ತಿರುವುದು ಪ್ರಶಂಸಾರ್ಹವಾಗಿದೆ.

No comments:

Post a Comment